ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಎನ್ಡಿಎ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಬಿದ್ದಿದೆ. ''ಕಾರ್ಯಕರ್ತರ ಒತ್ತಾಯದ ಮೇರೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ'' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪ್ರಕಟಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಚನ್ನಪಟ್ಟಣದಲ್ಲಿ ವಾಸ್ತವ್ಯ ಹೂಡಿ ಎನ್ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ'' ಘೋಷಣೆ ಮಾಡಿದರು.
''ನಿಖಿಲ್ ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತರು ಸ್ಪರ್ದಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಆದರೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅವರೇ ಕಣಕ್ಕಿಳಿಯಲು ಒಪ್ಪಿದ್ದಾರೆ'' ಎಂದು ಹೇಳಿದರು.
''ಕಾರ್ಯಕರ್ತರಿಗೆ ಟಿಕೆಟ್ ನೀಡಲು ಬಯಸಿದ್ದೆವು. ಈಗ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎನ್ಡಿಎ ಬಲಿಷ್ಠವಾಗಬೇಕು'' ಎಂದು ಅಭಿಪ್ರಾಯಪಟ್ಟರು.
ಬಿಎಸ್ವೈ ಘೋಷಣೆ: ಜೆಡಿಎಸ್ ಸಭೆ ಬಳಿಕ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಡಾಲರ್ಸ್ ಕಾಲೋನಿಯ ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿದರು. ಅಲ್ಲಿ ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಿತು. ಬಳಿಕ, ಚನ್ನಪಟ್ಟಣ ಉಪ ಸಮರಕ್ಕೆ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿ ಎಂದು ಬಿ.ಎಸ್. ಯಡಿಯೂರಪ್ಪ ಕೂಡ ಘೋಷಣೆ ಮಾಡಿದರು.
ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ?: ಕೆಲ ಹೊತ್ತಲ್ಲೇ ಬಿಎಸ್ವೈ ನಿವಾಸದಲ್ಲಿ ಘೋಷಣೆ