ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಶಂಕಿತ ಆರೋಪಿಯ ಕುರಿತು ಮಹತ್ವದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳ ತಂಡ ಇಂದು ಬೆಳಗ್ಗಿನಿಂದಲೇ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಹಾಗು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ದಾಳಿ ನಡೆಸಿ, ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ.
ಬೆಂಗಳೂರು ವರದಿ: ಎನ್ಐಎ ತಂಡ ನಗರದ 5 ಕಡೆಗಳಲ್ಲಿ ದಾಳಿ ನಡೆಸಿದೆ. ಬಳಿಕ ಶಿವಮೊಗ್ಗಕ್ಕೆ ತೆರಳಿದ್ದು, ಶಂಕಿತರ ಮನೆಗಳ ಮೇಲೆ ಕಾರ್ಯಾಚರಣೆ ಕೈಗೊಂಡಿದೆ.
ಶಿವಮೊಗ್ಗ ವರದಿ: ಬೆಂಗಳೂರು ಹಾಗೂ ಮುಂಬೈನಿಂದ 5 ವಾಹನಗಳಲ್ಲಿ ಸುಮಾರು 15 ಅಧಿಕಾರಿಗಳ ತಂಡ ತೀರ್ಥಹಳ್ಳಿಗೆ ಆಗಮಿಸಿದೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಬೆಟ್ಟಮಕ್ಕಿ ಹಾಗೂ ಇಂದಿರಾ ನಗರದ ಐದು ಕಡೆಗಳಲ್ಲಿ ಪರಿಶೀಲನೆ ಪ್ರಗತಿಯಲ್ಲಿದೆ.
ಕೆಫೆ ಸ್ಪೋಟದ ಶಂಕಿತನನ್ನು ತೀರ್ಥಹಳ್ಳಿ ಮೂಲದವನೆಂದು ಹೇಳಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ತೀರ್ಥಹಳ್ಳಿಯಿಂದ ಈತ ನಾಪತ್ತೆಯಾಗಿದ್ದನು. ಹೀಗಾಗಿ ತನಿಖಾಧಿಕಾರಿಗಳ ತಂಡ ಆತನ ಮನೆ ಸೇರಿದಂತೆ ಇತರೆ ಕಡೆ ದಾಳಿ ನಡೆಸುತ್ತಿದೆ.
ಚೆನ್ನೈ ವರದಿ: ಇದೇ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಚೆನ್ನೈನಲ್ಲೂ ದಾಳಿ ಕೈಗೊಂಡಿದೆ. ರಾಜಧಾನಿಯ ಮೂರು ಮತ್ತು ರಾಮನಾಥಪುರಂ ಜಿಲ್ಲೆಯ ಎರಡು ಕಡೆ ಸೇರಿದಂತೆ ಐದು ಸ್ಥಳಗಳಲ್ಲಿ ತನಿಖೆ ನಡೆಯುತ್ತಿದೆ. ಶಂಕಿತ ಬಾಂಬರ್ ಚೆನ್ನೈನ ಲಾಡ್ಜ್ವೊಂದರಲ್ಲಿ ತಂಗಿರುವ ಮಾಹಿತಿ ಲಭ್ಯವಾದ ಕಾರಣ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಚೆನ್ನೈನಲ್ಲಿ ತಂಗಿದ್ದ ಶಂಕಿತರು- ಎನ್‌ಐಎ ತನಿಖೆ - RAMESWARAM CAFE BLAST