ಚಾಮರಾಜನಗರ: ಜೀವ ವೈವಿಧ್ಯದಿಂದ ಕೂಡಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಬೇಧದ ಪರಾವಲಂಬಿ ಕಣಜ ಹುಳುವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಏಟ್ರಿ (ASHOKA Trust for Research in Ecology and the Environment) ಸಂಸ್ಥೆಯ ಸಂಶೋಧಕರಾದ ರಂಜಿತ್ ಎ.ಪಿ. ಮತ್ತು ಪ್ರಿಯದರ್ಶಿನ್ ಧರ್ಮರಾಜನ್ ಈ ಕಣಜ ಪ್ರಬೇಧವನ್ನು ಕಂಡು ಹಿಡಿದಿದ್ದಾರೆ.
ದೇಶದ 4 ಕಡೆ ಹೊಸ ಪ್ರಬೇಧದ ಪರಾವಲಂಬಿ ಕಣಜ: ಇವರು ಬಿಳಿಗಿರಿರಂಗನ ಬೆಟ್ಟದ ಜೊತೆಗೆ ತಮಿಳುನಾಡಿನ ಕಲಕಾಡ್ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಖಂಡದ ತೆಹ್ರಿಯಲ್ಲಿ ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ ಹಚ್ಚಿ ಸಂಶೋಧನಾ ವರದಿ ಪ್ರಕಟಿಸಿದ್ದಾರೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಕಾಳಿಂಗ ಸರ್ಪದ ಸಂಶೋಧನೆ ಮತ್ತು ಸಂರಕ್ಷಣೆಗೆ ದುಡಿದಿರುವ ಡಾ.ಪಿ.ಗೌರಿಶಂಕರ್ ಹೆಸರಿಡಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಇದೇ ಸಂಶೋಧನಾ ತಂಡ ಹೊಸ ಪ್ರಬೇಧದ ಹಲ್ಲಿ ಹಾಗೂ ಕಣಜವನ್ನು ಪತ್ತೆ ಮಾಡಿದ್ದರು.
ಸಂಶೋಧಕರು ಹೇಳುವುದೇನು?: ಸಂಶೋಧಕ ಡಾ.ಪ್ರಿಯದರ್ಶನ್ ಧರ್ಮರಾಜನ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ಈ ಸಂಶೋಧನೆಗಳು ಭಾರತೀಯ ಉಪಖಂಡದ ಶ್ರೀಮಂತ ಜೀವವೈವಿಧ್ಯತೆ, ಪರಿಸರದ ಪಾತ್ರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಜೀವವೈವಿಧ್ಯದ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತವೆ'' ಎಂದು ಹೇಳಿದರು.
ಇದನ್ನೂ ಓದಿ: ಎಚ್.ಡಿ.ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ: ಕಾದಾಟದಲ್ಲಿ ಸಾವನ್ನಪ್ಪಿರುವ ಶಂಕೆ