ಮಂಡ್ಯ : ಹನುಮ ಧ್ವಜ ವಿವಾದ ಭುಗಿಲೆದ್ದಿದ್ದ ಕೆರಗೋಡು ಗ್ರಾಮದ ಅರ್ಜುನ ಸ್ತಂಭದಲ್ಲಿ ಹೊಸದಾಗಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಇದೀಗ ಜಿಲ್ಲಾಡಳಿತ ಹಳೆಯ ರಾಷ್ಟ್ರಧ್ವಜವನ್ನು ಬದಲಾಯಿಸಿ, ಹೊಸ ರಾಷ್ಟ್ರ ಧ್ವಜಾರೋಹಣ ಮಾಡಲಾಗಿದೆ.
ಕಳೆದ ಜನವರಿ 22ರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೆನಪಿಗಾಗಿ ಕೆರಗೋಡಿನಲ್ಲಿ 108 ಅಡಿ ಎತ್ತರದ ಅರ್ಜುನ ಸ್ತಂಭದ ಮೇಲೆ ಹನುಮ ಧ್ವಜ ಹಾರಿಸಿದ್ದು ವಿವಾದ ಸೃಷ್ಟಿಸಿತ್ತು. ಹನುಮ ಧ್ವಜವನ್ನು ಸರ್ಕಾರ ತೆರವುಗೊಳಿಸಿ, ತ್ರಿವರ್ಣ ಧ್ವಜ ಹಾರಿಸಿತ್ತು. ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಹಿಂದೆ ರಾಷ್ಟ್ರ ಧ್ವಜ ಹಾರಿಸಲಾಗಿತ್ತು. ಗಾಳಿಗೆ ಧ್ವಜ ಗಂಟಾಗಿ ಸರಿಯಾದ ರೀತಿಯಲ್ಲಿ ಹಾರುತ್ತಿರಲಿಲ್ಲ. ಹೀಗಾಗಿ ಹಳೆಯ ಧ್ವಜ ಬದಲಿಸಿ, ಹೊಸ ಧ್ವಜ ಹಾರಿಸಲಾಗಿದೆ. ಹಿಂದೆ ಇದ್ದ ಧ್ವಜದ ಅಳತೆಯಲ್ಲೇ ಈಗ ಹೊಸ ರಾಷ್ಟ್ರ ಧ್ವಜ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ರಾಷ್ಟ್ರ ಧ್ವಜ ಹಾರಿಸುತ್ತೇವೆ ಎಂದರು.
ದ್ವಜಾರೋಹಣದ ನಂತರ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಇಷ್ಟು ದೊಡ್ಡ ಧ್ವಜಸ್ತಂಭಕ್ಕೆ ಚಿಕ್ಕ ರಾಷ್ಟ್ರಧ್ವಜ ಸಲ್ಲದು. ಜಿಲ್ಲಾಡಳಿತ ಹಾರಿಸಿದ ರಾಷ್ಟ್ರಧ್ವಜ ಅಸಮಾಧಾನ ತಂದಿದೆ. ದೊಡ್ಡ ರಾಷ್ಟ್ರ ಧ್ವಜ ಹಾರಿಸುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ತರಾತುರಿಯಾಗಿ ಹೊಸ ಧ್ವಜ ಹಾರಿಸಿದ್ದಾರೆ. ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲಲ್ಲ. ಜೂ.4 ರ ನಂತರ ಹನುಮ ಧ್ವಜ ಹೋರಾಟ ತೀವ್ರವಾಗಲಿದೆ'' ಎಂದು ಗ್ರಾಮಸ್ಥ ರಾಮಚಾರ್ ತಿಳಿಸಿದ್ದಾರೆ.
''ಹೋರಾಟದ ಪರಿಣಾಮ ಸರ್ಕಾರ ಎದುರಿಸಲಿದೆ. ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಡಲು ಅಭ್ಯಂತರವಿಲ್ಲ. ಆದರೆ ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು'' ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕೆರಗೋಡು ಹನುಮಧ್ವಜ ತೆರವು: ಹಿಂದೂಪರ ಸಂಘಟನೆಗಳ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ