ಚಿಕ್ಕೋಡಿ: ನೂತನ ಜಿಲ್ಲಾ ರಚನೆ ನಮ್ಮ ವ್ಯಾಪ್ತಿ ಬರುವುದಿಲ್ಲ, ಹೈಕೋರ್ಟ್ ಮುಂಭಾಗದ ಕಟ್ಟಡದಲ್ಲಿ (ವಿಧಾನಸೌಧದಲ್ಲಿ) ನಿರ್ಣಯವನ್ನು ಮಾಡಬೇಕು. ಅದು ಪೊಲಿಟಿಕಲ್ ವಿಷಯ ಆಗಿರುವುದರಿಂದ ಜನಪ್ರತಿನಿಧಿಗಳು ಅದನ್ನು ತೀರ್ಮಾನಿಸಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಹೇಳಿದರು.
ಭಾನುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬಾರ್ ಅಸೋಸಿಯೇಶನ್ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚಿಕ್ಕೋಡಿ ಜಿಲ್ಲಾ ರಚನೆ ಮತ್ತು ಚಿಕ್ಕೋಡಿ ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಕುರಿತು ನನಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಚಿಕ್ಕೋಡಿ ಜಿಲ್ಲಾ ರಚನೆಯಾಗುವುದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ಅದು ಪೊಲಿಟಿಕಲ್ ವಿಷಯವಾಗಿದ್ದರಿಂದ ಅದು ವಿಧಾನಸೌಧದಲ್ಲಿ ತೀರ್ಮಾನವಾಗಬೇಕು.
ಚಿಕ್ಕೋಡಿಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ನಮ್ಮ ವ್ಯಾಪ್ತಿ ಬರುವುದರಿಂದ ಕೆಲವು ನಿಯಮ ಇದ್ದು, ಅದನ್ನು ಪರಿಶೀಲಿಸಿ ಜಾರಿ ಮಾಡಲಾಗುವುದು. ಸಂಬಂಧಪಟ್ಟವರ ಮೂಲಕ ಮನವಿ ಸಲ್ಲಿಸಿದರೆ ಒಂದು ಕಮೀಟಿ ಇರುತ್ತದೆ. ಸಮಿತಿ ಹಾಗೂ ಸರ್ಕಾರ ಅನುಮೋದನೆ ಕೊಟ್ಟ ಬಳಿಕ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಪರಿಶೀಲಿಸಿ ಅನುಮೋದನೆ ನೀಡುತ್ತೇವೆ. ನಾವು ಈ ತರಹ ಬೇಡಿಕೆಗಳನ್ನು ಸಣ್ಣ ತಾಲೂಕುಗಳಿಗೆ ಈಗಾಗಲೇ ನೀಡಲಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ವ್ಯಾಪಾರ ವಹಿವಾಟು ಕೇಂದ್ರ: ಚಿಕ್ಕೋಡಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನಗೆ ತುಂಬಾ ಸಂತೋಷ ಆಗಿದೆ. ಚಿಕ್ಕೋಡಿ ಒಂದು ಒಳ್ಳೆಯ ಪ್ರದೇಶ. 1724ರಲ್ಲಿ ಕ್ಯಾಪ್ಟನ್ ನೂರ್ ಎಂಬುವರು ಈ ಸ್ಥಳದ ಬಗ್ಗೆ ಆರ್ಟಿಕಲ್ ಬರೆದಿದ್ದಾರೆ. ಚಿಕ್ಕ ಕೋಡಿ ಮತ್ತು ಹಿರೆ ಕೋಡಿ ಎಂದು ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಮೂರು ನೂರು ವರ್ಷದ ಹಿಂದೆ ಈ ಭಾಗವು ಒಂದು ಒಳ್ಳೆಯ ವ್ಯಾಪಾರ ವಹಿವಾಟು ಕೇಂದ್ರವಾಗಿತ್ತು ಎಂದು ತಿಳಿಸಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಚಿಕ್ಕೋಡಿ ಭಾಗ ಮುಖ್ಯ ಪಾತ್ರವನ್ನು ವಹಿಸಿತ್ತು. 1939ರಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ಅವರು ಕೂಡ ಇಲ್ಲಿನ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು. ಚಿಕ್ಕೋಡಿ ಎಂಬುದು ಉದ್ಯೋಗ ಕೇಂದ್ರವಾಗಿದ್ದು, ಒಳ್ಳೆಯ ಸ್ಥಳವೆಂದು ಮುಖ್ಯನ್ಯಾಯಮೂರ್ತಿ ದಿನೇಶ್ ಕುಮಾರ್ ಬಣ್ಣಿಸಿದರು.
ಪ್ರಕರಣಗಳು ಬಾಕಿ ಬಿಡಬೇಡಿ, ಆದಷ್ಟು ಬೇಗನೆ ಮುಗಿಸಬೇಕು. ಎಷ್ಟು ಬೇಗನೆ ಮುಗಿಸುತ್ತೇವೆಯೋ ಅಷ್ಟು ನಮಗೆ ಹೊಸ ಕೇಸುಗಳು ಬರುತ್ತವೆ ಎಂದು ವಕೀಲರಿಗೆ ಮತ್ತು ಕಿರಿಯ ನ್ಯಾಯಾಧೀಶರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಸಚಿನ್ ಮಗದುಮ್, ಕೆ.ಎಸ್. ಹೇಮಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂಓದಿ:ನಿವೃತ್ತರು, ಹಿರಿಯ ನಾಗರಿಕರನ್ನು ಆಯಾಸಗೊಳ್ಳುವಂತೆ ಮಾಡಬಾರದು: ಹೈಕೋರ್ಟ್