ರಾಮನಗರ: ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕಪುರ ಅಥವಾ ಮೈಸೂರು ಮಾರ್ಗದ ಸೂಕ್ತ ಪ್ರದೇಶ ಆಯ್ಕೆ ಮಾಡಿಕೊಳ್ಳುವ ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗಕ್ಕೆ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ. ಅದು, ಬಹುತೇಕ ರಾಮನಗರ ಜಿಲ್ಲೆಯಲ್ಲೇ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಆನೇಕಲ್‍ನ ಜಿಗಣಿ, ಕನಕಪುರ, ಮೈಸೂರು ರಸ್ತೆ, ತುಮಕೂರು ಸೇರಿದಂತೆ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಯಾಣಿಕರು ಹೆಚ್ಚು ಎಲ್ಲಿ ಲಭಿಸುತ್ತಾರೆ ಎಂಬುದು ಮಾತ್ರವಲ್ಲದೇ ರಸ್ತೆ, ರೈಲು ಮತ್ತು ಮೆಟ್ರೊ ರೈಲಿನ ಸಂಪರ್ಕವಿರುವ ಪ್ರದೇಶವನ್ನು ಗುರುತಿಸಿ, ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಕನಕಪುರ, ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೂಲಸೌಕರ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿದ್ದು, ''ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ಐದಾರು ಸ್ಥಳಗಳನ್ನು ಗುರುತಿಸಲಾಗಿದೆ. ಹಾಲಿ ವಿಮಾನ ನಿಲ್ದಾಣಕ್ಕೆ 60ರಿಂದ 70 ಕಿಲೋ ಮೀಟರ್ ದೂರದಲ್ಲಿ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿದೆ'' ಎಂದಿದ್ದಾರೆ.
''ಯಾವ ಸ್ಥಳ ಸೂಕ್ತ ಎಂಬ ಬಗ್ಗೆ ನಮಗೆ ಪ್ರಾಥಮಿಕ ವರದಿ ಸಿಕ್ಕಿದೆ. ಆದರೆ, ತಾಂತ್ರಿಕ ತಜ್ಞರನ್ನು ನೇಮಿಸಿ ಅವರಿಂದ ವರದಿ ಪಡೆದು ಚಾಲನೆ ನೀಡಲಾಗುವುದು. ನಮ್ಮವರೇ ಕೇಂದ್ರದಲ್ಲಿ ಕೈಗಾರಿಕಾ ಸಚಿವರಿರುವುದರಿಂದ ಹೊಸ ವಿಮಾನ ನಿಲ್ದಾಣಕ್ಕೆ ತ್ವರಿತಗತಿಯಲ್ಲಿ ಅನುಮೋದನೆ ದೊರೆಯಬಹುದು'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಂಡವಾಳ ಹೂಡಿಕೆ ಹೆಚ್ಚುವ ಸಾಧ್ಯತೆ: ''ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಎರಡು ವಾರಗಳ ತಮ್ಮ ಭೇಟಿಯಿಂದ 6,450 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಬದ್ಧತೆ ಪಡೆದುಕೊಳ್ಳಲಾಗಿದೆ. ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ'' ಎಂದು ಸಚಿವರು ತಿಳಿಸಿದರು.
ಕರ್ನಾಟಕದ ನಿಯೋಗ ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ ಬಂಡವಾಳ ಹೂಡಿಕೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗಿದೆ. ನಂತರ ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ, ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು.