ಬೆಂಗಳೂರು : ಮನೆ ಮುಂದೆ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ನೆರೆಹೊರೆಯವರ ನಡುವೆ ಆರಂಭವಾದ ಗಲಾಟೆ ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿಯಲ್ಲಿ ನಡೆದಿದೆ. ನೆರೆಮನೆಯಲ್ಲಿರುವ ಪ್ರಣಬ್ ಜ್ಯೋತಿ ಸಿಂಗ್ - ನೇಹಾ ದಂಪತಿಯ ಕಾಟಕ್ಕೆ ಬೇಸತ್ತ ಮಂಜುನಾಥ್ ಹಾಗೂ ಸರಿತಾ ದಂಪತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿಟೆಲ್ಸ್ಗೆ ಬರೋದಾದ್ರೆ.., ಕೋಡಿಚಿಕ್ಕನಹಳ್ಳಿಯ ಚೈತನ್ಯ ಪ್ಯಾರಡೈಸ್ ಅಪಾರ್ಟ್‌ಮೆಂಟಿನ 3ನೇ ಮಹಡಿಯಲ್ಲಿ ಮಂಜುನಾಥ್ ಮತ್ತು ಸರಿತಾ ದಂಪತಿ ವಾಸಿಸುತ್ತಿದ್ದಾರೆ. ಇವರ ಪಕ್ಕದ ಮನೆಯಲ್ಲಿ ನೇಹಾ ಪ್ರಣಬ್ ಜ್ಯೋತಿ ಸಿಂಗ್ ವಾಸವಿದ್ದಾರೆ. ಎರಡು ವರ್ಷಗಳಿಂದ ಮನೆ ಮುಂದೆ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಎರಡೂ ಮನೆಯವರ ನಡುವೆ ಗಲಾಟೆಯಾಗಿತ್ತು. ಮಂಜುನಾಥ್ ದಂಪತಿಯ ಮನೆ ಬಾಗಿಲು ತೆರೆದರೆ ಕಾಣುವ ಹಾಗೆ ನೇಹಾ ತಮ್ಮ ಚಪ್ಪಲಿ ಸ್ಟ್ಯಾಂಡ್ ಇರಿಸಿರುತ್ತಿದ್ದರಂತೆ. ಇದರಿಂದ ಬೇಸತ್ತ ಮಂಜುನಾಥ್, ಮನೆ ಮುಂದೆ ಚಪ್ಪಲಿ ಸ್ಟಾಂಡ್ ಇಡದಂತೆ ನೇಹಾಗೆ ಹೇಳಿದ್ದರು. ಆದರೆ, 'ಜಾಗ ಇರೋದೆ ಅಷ್ಟು ಇನ್ನೆಲ್ಲಿ ಇಡಲು ಸಾಧ್ಯ? ನಿಮಗೆ ಕಷ್ಟವಾದರೆ ಮನೆ ಖಾಲಿ ಮಾಡಿಕೊಂಡು ಹೋಗಿ' ಎಂದು ನೇಹಾ ಗಲಾಟೆ ಮಾಡಿಕೊಂಡಿದ್ದರಂತೆ.
ಅಂದಿನಿಂದಲೂ ಎರಡೂ ಕುಟುಂಬಗಳ ನಡುವೆ ವ್ಯಾಜ್ಯ ಇದೆ. ಆದರೆ ಅದೇ ಗಲಾಟೆ ಮುಂದುವರೆದು ಮಂಜುನಾಥ್ ಮನೆಯವರಿಗೆ ನೇಹಾ ದಿನನಿತ್ಯ ಕಿರುಕುಳ ನೀಡ್ತಿದ್ದಾರೆ. ಮನೆಯಿಂದ ಹೋಗುವಾಗ ಬರುವಾಗ ಉದ್ದೇಶಪೂರ್ವಕವಾಗಿ ಮಂಜುನಾಥ್ ಮನೆಯ ಚಪ್ಪಲಿ ಸ್ಟ್ಯಾಂಡ್ ಬೀಳಿಸುವುದು, ಮನೆ ಮುಂದೆ ಬಿಡಿಸಿದ್ದ ರಂಗೋಲಿಯನ್ನು ಕಾಲಿಂದ ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಿತ್ಯ ಕಿರುಕುಳ ಸಹಿಸಲಾರದ ಮಂಜುನಾಥ್ ಹಾಗೂ ಸರಿತಾ ದಂಪತಿ, ನೇಹಾಳ ಕೃತ್ಯಗಳನ್ನೊಳಗೊಂಡ ಸಿಸಿಟಿವಿ ದೃಶ್ಯಗಳ ಸಮೇತ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಗಲಾಟೆಯ ವಿಚಾರವಾಗಿ ಕಳೆದ ಡಿಸೆಂಬರ್‌ನಲ್ಲಿ ನೇಹಾ ಕೊಟ್ಟ ದೂರಿನ ಆಧಾರದಲ್ಲಿ ಮಂಜುನಾಥ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಠಾಣಾ ಪೊಲೀಸರು, ಈಗ ಮಂಜುನಾಥ್ ಸಾಕ್ಷಿ ಸಮೇತ ದೂರು ನೀಡಿದ್ದರೂ ಸಹ ಎಫ್ಐಆರ್ ದಾಖಲಿಸಿಕೊಳ್ಳದ ಆರೋಪ ಕೇಳಿ ಬಂದಿದೆ. ಇದರಿಂದ ನೊಂದ ದಂಪತಿ ಶನಿವಾರ ಸಂಜೆ 6 ಗಂಟೆಯಿಂದಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಎದುರು ಧರಣಿ ಕುಳಿತು ತಮ್ಮ ಆಕ್ರೋಶ ಹೊರಹಾಕಿದ್ದರು. ಸದ್ಯ ಈ ಘಟನೆ ಕುರಿತು ಎನ್ಸಿಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ: ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ವಶಕ್ಕೆ - Hindalaga Jail