ಮೈಸೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಕೊಡಬೇಕು. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಿಎಂ ಸೇರಿದಂತೆ ಯಾವೊಬ್ಬ ಸಚಿವ ಮೃತಳ ಮನೆಗೆ ಹೋಗಿ ಆಕೆಯ ಕುಟುಂಬಕ್ಕೆ ಸಾಂತ್ವನ, ಧೈರ್ಯ ಹೇಳುವ ಪ್ರಯತ್ನ ಮಾಡುವ ಬದಲಾಗಿ ಪೊಲೀಸರನ್ನು ಬಳಸಿಕೊಂಡು ತೇಜೋವಧೆ ಮಾಡುವಂತಹ ಕೃತ್ಯಕ್ಕೆ ಕಾಂಗ್ರೆಸ್ ಸರ್ಕಾರ ಇಳಿದಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಲಾಯಕ್ ಮುಖ್ಯಮಂತ್ರಿಯನ್ನು ಪಡೆದಿರುವುದಕ್ಕೆ ಜನರು ಶಾಪ ಹಾಕುತ್ತಿದ್ದಾರೆ. ಕೊಲೆಗಡುಕರನ್ನು ರಕ್ಷಣೆ ಮಾಡುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಯಾವ ರೀತಿ ರಕ್ಷಣೆ ಮಾಡಿದ್ದೀರಿ ಎಂಬುದು ಗೊತ್ತಿದೆ ನಮಗೆ. ಒಬ್ಬ ದಲಿತ ಶಾಸಕನಿಗೆ ನ್ಯಾಯ ಸಿಗಲಿಲ್ಲ. ಮೊನ್ನೆ ಹತ್ಯೆಯಾದ ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತದೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಹೆಣ್ಣು ಮಕ್ಕಳ ಗೌರವ ಉಳಿಸಲು ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದಾನೆ. ನಾವು ರಾಜಕೀಯ ಮಾಡುತ್ತಿಲ್ಲ. ಮಹಿಳೆಯರ ಗೌರವಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಹಾಗೂ ಮಾಜಿ ಸಭಾಪತಿ ರಮೇಶ್ ಕುಮಾರ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ಅವರು ಈ ರೀತಿ ಹೇಳಿಕೆ ನೀಡಿದ್ದರಿಂದಲೇ ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಆಚಾರವಿಲ್ಲದ ನಾಲಿಗೆ, ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.