ಬೆಂಗಳೂರು: ''ಮೈಸೂರು ನಗರದಿಂದ 15 ಕಿಲೋ ಮೀಟರ್ ದೂರದ ಕೆಸರೆ ಗ್ರಾಮದಲ್ಲಿ ಜಮೀನಿಗೆ ಬದಲಾಗಿ, ಮೈಸೂರು ನಗರದ ಹೃದಯಭಾಗದಲ್ಲಿರುವ ವಿಜಯನಗರ ಮೂರನೇ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿಗೆ ನಿವೇಶನ ಹಂಚಲಾಗಿದ್ದು, ಈ ಸಂಬಂಧ ತನಿಖೆ ನಡೆಯಬೇಕಿದೆ'' ಎಂದು ಹೈಕೋರ್ಟ್ ತಿಳಿಸಿದೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
''ಮುಖ್ಯಮಂತ್ರಿಗಳ ಪತ್ನಿಗೆ ಪರ್ಯಾಯ ನಿವೇಶನ ನೀಡಬೇಕಾದಲ್ಲಿ ಕೆಸರೆಯಲ್ಲೇ ಅಥವಾ ಆ ಬಳಿಕ ನಿರ್ಮಾಣಗೊಂಡ ಯಾವುದಾದರೂ ಬಡಾವಣೆಯಲ್ಲಿ ನೀಡಬಹುದಾಗಿತ್ತು. ಇದಕ್ಕೆ ಬದಲಾಗಿ 1991ರಲ್ಲಿ ನಿರ್ಮಾಣವಾದ ವಿಜಯನಗರದ ಮೂರನೇ ಹಂತದಲ್ಲಿ ನೀಡುವುದಲ್ಲ'' ಎಂದು ಪೀಠ ಹೇಳಿದೆ.
ಇದಲ್ಲದೆ ಇನ್ನಾವ ಪ್ರಕರಣದ ತನಿಖೆ?- ಕೋರ್ಟ್: ''ಈ ಪ್ರಕರಣದಲ್ಲಿ ಫಲಾನುಭವಿಗಳು ಅರ್ಜಿದಾರರಿಗೆ ಅಪರಿಚಿತರಲ್ಲ, ಮುಖ್ಯಮಂತ್ರಿಗಳ ಕುಟುಂಬವೇ ಲಾಭ ಪಡೆದಿದೆ. ಒಂದು ವೇಳೆ ಈ ಪ್ರಕರಣಕ್ಕೆ ತನಿಖೆ ಬೇಡವೆಂದರೆ, ಇನ್ನು ಯಾವ ಪ್ರಕರಣದ ಬಗ್ಗೆ ತನಿಖೆ ನಡೆಸಬಹುದು?'' ಎಂದು ಪೀಠ ಹೇಳಿದೆ.
ಯತೀಂದ್ರ ಮೌನವಾಗಿದ್ದರು ಎಂಬ ವಾದ ಹಾಸ್ಯಾಸ್ಪದ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ನಿ 50:50 ಅನುಪಾತದಲ್ಲಿ ಪರಿಹಾರ ಅಥವಾ ಪರಿಹಾರ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈ ಮಾದರಿಯಲ್ಲಿ ಪರಿಹಾರ ಪ್ರಕಟಿಸುವಾಗಲೂ ನಿಯಮಗಳ ಉಲ್ಲಂಘನೆಯಾಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಬಗ್ಗೆ ನಡೆದ ಮುಡಾ ಸಭೆಯಲ್ಲಿ ದೂರುದಾರರ ಮಗ (ಡಾ.ಯತೀಂದ್ರ) ಭಾಗಿಯಾಗಿದ್ದರು. ಆದರೆ, ಸಭೆಯಲ್ಲಿ ಡಾ.ಯತೀಂದ್ರ ಮೌನವಾಗಿದ್ದರು ಎಂದು ದೂರುದಾರರ ಪರ ವಾದ ಮಂಡಿಸಲಾಗಿದೆ. ಈ ವಾದ ಹಾಸ್ಯಾಸ್ಪದ. ಒಬ್ಬ ಕಾನೂನು ನಿರ್ಮಾತೃ, ಮಾಜಿ ಮುಖ್ಯಮಂತ್ರಿಯ ಮತ್ತು ಆಗಿನ ಪ್ರತಿಪಕ್ಷದ ನಾಯಕನ ಮಗ, ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
14 ಸೈಟ್‌ಗಳ ಕುರಿತು ತನಿಖೆ ನಡೆಯಲಿ: ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡ ಜನರಿಗೆ ಮೈಸೂರಿನ ಶ್ರೀಮಂತ ಬಡಾವಣೆಯಲ್ಲಿ ಜಮೀನು ನೀಡಿದ ಒಂದೇ ಒಂದು ಉದಾಹರಣೆಯನ್ನು ಉಲ್ಲೇಖಿಸಿಲ್ಲ. ಮುಖ್ಯಮಂತ್ರಿಯ ಪತ್ನಿಗೆ 50:50 ಮೂಲಕ ಹಂಚಿಕೆಯ ಲಾಭ ದಕ್ಕುತ್ತಿದ್ದಂತೆ ಆ ನಿಯಮವನ್ನು ಹಿಂಪಡೆಯವ ಪ್ರಯತ್ನ ನಡೆದಿರುವುದು ಅಚ್ಚರಿಯ ಸಂಗತಿ. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾದ ಬಳಿಕ (ಅಕ್ಟೋಬರ್, 27) 50:50 ಅನುಪಾತದಲ್ಲಿ ಪರಿಹಾರ ಭೂಮಿ ನೀಡುವ ನಿರ್ಣಯವನ್ನು ಮುಡಾ ಹಿಂತೆಗೆದುಕೊಂಡಿತ್ತು. ಆ ಸಭೆಯಲ್ಲಿ ಯತೀಂದ್ರ ಅವರು ಭಾಗಿಯಾಗಿದ್ದರು. ಕಾನೂನುಬಾಹಿರ ನಿರ್ಣಯದ ಆಧಾರದ ಮೇಲೆ ನೀಡಲಾಗಿರುವ 14 ಸೈಟ್‌ಗಳ ಕುರಿತು ತನಿಖೆ ನಡೆಯಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: ರಾಜ್ಯಪಾಲರ ನಿರ್ಧಾರದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ: ಹೈಕೋರ್ಟ್ - High Court