ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಪಂಚಗಂಗಾ ಹಾಗೂ ಕೃಷ್ಣಾ ನದಿಯ ನೀರು ಹೆಚ್ಚಳವಾಗಿದೆ. ಪರಿಣಾಮ ಪುರಾಣ ಪ್ರಸಿದ್ಧ ನರಸಿಂಹವಾಡಿ ದತ್ತಾತ್ರೇಯ ಮಂದಿರವು ಸಂಪೂರ್ಣವಾಗಿ ಜಲದಿಗ್ಬಂಧನಗೊಂಡಿದೆ.
ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ದತ್ತಾತ್ರೇಯ ಮಂದಿರಕ್ಕೆ ಪಂಚಗಂಗಾ ಹಾಗೂ ಕೃಷ್ಣಾ ನದಿಯ ನೀರು ನುಗ್ಗಿದೆ. ನದಿ ನೀರಿನಿಂದ ಪುಣ್ಯಕ್ಷೇತ್ರ ಮುಳುಗಡೆಗೊಂಡಿದೆ. ಮೊಣಕಾಲು ಮಟ್ಟದಲ್ಲಿ ನೀರು ಹರಿಯುತ್ತಿದ್ದರೂ ಭಕ್ತರು ಮಾತ್ರ ದತ್ತಾತ್ರೇಯ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಪಂಚಗಂಗಾ ನದಿ ಹಾಗೂ ಕೃಷ್ಣಾ ನದಿ ಸಂಗಮವಾಗುವ ಕ್ಷೇತ್ರವು ಕೂಡಾ ಇದಾಗಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಈ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಎರಡು ಉಭಯ ರಾಜ್ಯಗಳ ಭಕ್ತಾದಿಗಳು ಭೇಟಿ ನೀಡಿ ದರ್ಶನವನ್ನು ಪಡೆದುಕೊಳ್ಳುತ್ತಾರೆ. ಮುಂಜಾನೆ ದೇವಸ್ಥಾನಕ್ಕೆ ನೀರು ನುಗ್ಗಿದ್ದು ನೀರಿನಲ್ಲಿಯೇ ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಜಲಾಶಯಗಳಿಂದ ಇದುವರೆಗೆ ಅಧಿಕೃತವಾಗಿ ನೀರು ಬಿಡುಗಡೆ ಮಾಡಿಲ್ಲ.
ಕಳೆದ ಒಂದು ವಾರಗಳಿಂದ ಮಳೆ ನೀರಿನಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ನದಿ ಪಾತ್ರ ಬಿಟ್ಟು ನದಿಗಳು ಹರಿಯುತ್ತಿರುವುದರಿಂದ ದೇವಸ್ಥಾನಕ್ಕೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ಇವತ್ತು ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದು ನೀರಿನ ಮಟ್ಟ ಹೆಚ್ಚಾದರೆ ದೇವರ ದರ್ಶನ ನಿರ್ಬಂಧಿಸಲಾಗುವುದು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಏಳು ಜನರ ದಾರುಣ ಸಾವು, ಮುಂದುವರಿದ ಕಾರ್ಯಾಚರಣೆ - hill collapsed