ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2024 ರಲ್ಲಿ ಡ್ರಗ್ಸ್ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಒಟ್ಟು 1,090 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 7.51 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿದೆ.
2024ರಲ್ಲಿ ಮಾದಕದ್ರವ್ಯ ಮಾರಾಟ ಮಾಡಿರುವುದು 88, ಸೇವನೆಗೆ ಸಂಬಂಧಿಸಿದಂತೆ 1,002 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ 157 ಹಾಗೂ ಸೇವನೆಗೆ ಸಂಬಂಧಿಸಿದಂತೆ 1,211 ಮಂದಿ ಸಹಿತ ಒಟ್ಟು 1,372 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ವಿದೇಶಿಯರಾಗಿದ್ದಾರೆ. 2023ಕ್ಕೆ ಹೋಲಿಸಿದರೆ ಡ್ರಗ್ಸ್ ಸೇವನೆ ಪ್ರಕರಣಗಳಲ್ಲಿ ಶೇ.62ರಷ್ಟು ಏರಿಕೆಯಾಗಿದೆ.
ಕಾವೂರು, ಉಳ್ಳಾಲ, ಉತ್ತರ ಠಾಣೆ, ಕಂಕನಾಡಿ ನಗರ ಮತ್ತು ಕೊಣಾಜೆ ಠಾಣೆಗಳ ವ್ಯಾಪ್ತಿಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮೂವರು ಡ್ರಗ್ಸ್ ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 28 ಮಂದಿಯನ್ನು ಗಡಿಪಾರು ಮಾಡಲಾಗಿದೆ. 123 ಮಂದಿಯಿಂದ ಬಾಂಡ್ ಪಡೆದುಕೊಳ್ಳಲಾಗಿದೆ.
2024 ರಲ್ಲಿ 191.073 ಗಾಂಜಾ, 7.437 ಕೆ.ಜಿ. ಸಿಂಥೆಡಿಕ್ ಡ್ರಗ್ಸ್ ಸಹಿತ 7,51,73,000 ರೂ. ಮೌಲ್ಯದ ಡ್ರಗ್ಸ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 2022ರಲ್ಲಿ 59,60,000 ರೂ. ಮೌಲ್ಯದ ಹಾಗೂ 2023ರಲ್ಲಿ 1,71,12,000 ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.314 ರಷ್ಟು ಹೆಚ್ಚು ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಶಾಲಾ ಕಾಲೇಜುಗಳು ಸಹಿತ ಕಮಿಷನರೇಟ್ ವ್ಯಾಪ್ತಿಯ 212 ಕಡೆಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸಲು ಹಣ ವಸೂಲಿ; ರೈಲ್ವೆ ಇಲಾಖೆಯ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಬಂಧನ