ಬೆಂಗಳೂರು: ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಆರೋಪ ಇದೀಗ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ವಿವಾದಕ್ಕೂ ಮುಂಚೆ 20 ವರ್ಷಗಳಿಂದ ತಿರುಪತಿ ಲಡ್ಡುಗೆ ನಮ್ಮ ಶುದ್ಧ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ 2023ರಲ್ಲಿ ದರದ ವಿಚಾರದಲ್ಲಿ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. ಅಷ್ಟಕ್ಕೂ ತಿರುಪತಿ ಲಡ್ಡುಗೆ ನಂದಿನಿ ತುಪ್ಪದ ನಂಟೇನು ಎಂಬ ವರದಿ ಇಲ್ಲಿದೆ.
ಸುಮಾರು 20 ವರ್ಷಗಳಿಂದ ನಂದಿನಿ ತುಪ್ಪವು ತಿರುಪತಿ ಲಡ್ಡುವಿನ ಸ್ವಾದವನ್ನು ಹೆಚ್ಚಿಸುತ್ತಿತ್ತು. ಆದರೆ 2022-23ರಲ್ಲಿ ದರದ ವಿಚಾರದಲ್ಲಿ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಬಳಕೆ ಸ್ಥಗಿತವಾಗಿತ್ತು. ಈಗ ಮತ್ತೆ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಇದರಿಂದಾಗಿ ತಿರುಪತಿ ಲಡ್ಡುವಿನಲ್ಲಿ ಶೀಘ್ರದಲ್ಲೇ ನಂದಿನಿ ತುಪ್ಪದ ಘಮ ಸೇರಲಿದೆ.
2013–14ನೇ ಸಾಲಿನಿಂದ 2021–22ರವರೆಗೆ 5 ಸಾವಿರ ಟನ್ ತುಪ್ಪವನ್ನು ಕೆಎಂಎಫ್, ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಿದೆ. 2022-23ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ವೇಳೆ ತೀವ್ರ ಸ್ಪರ್ಧೆ ಏರ್ಪಟ್ಟ ಕಾರಣ ತಿರುಪತಿ ದೇವಸ್ಥಾನಕ್ಕೆ ಕೆಎಂಎಫ್ ತುಪ್ಪ ಪೂರೈಸಿರಲಿಲ್ಲ. ನಂದಿನಿ ತುಪ್ಪದ ದರ ಹೆಚ್ಚಿಗೆ ಇದ್ದ ಕಾರಣ ಟೆಂಡರ್ ಪ್ರಕ್ರಿಯೆಯಲ್ಲಿ ತಿರಸ್ಕೃತವಾಯಿತು. ಆದರೆ ಇದೀಗ ಮತ್ತೆ ನಂದಿನಿ ತುಪ್ಪದ ಪೂರೈಕೆಗೆ ತಿರುಪತಿಯಿಂದ ಬೇಡಿಕೆ ಬಂದಿದ್ದು, ಮತ್ತೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿದೆ.
ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ವಿವರ ಹೀಗಿದೆ: 2013-14ನೇ ಸಾಲಿನಿಂದ 2021-22ರ ವರೆಗೆ 5 ಸಾವಿರ ಟನ್ ತುಪ್ಪವನ್ನು ಕೆಎಂಎಫ್ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಿದೆ. ಕೆಎಂಎಫ್ ನೀಡಿರುವ ಮಾಹಿತಿಯಂತೆ ಟಿಟಿಡಿಗೆ 2014-15ರಲ್ಲಿ 200 ಮೆಟ್ರಿಕ್ ಟನ್ ನಂದಿನಿ ತುಪ್ಪ ಪೂರೈಸಲಾಗಿತ್ತು. ಆಗ ಪ್ರತಿ ಕೆಜಿ ತುಪ್ಪಕ್ಕೆ 306 ರೂ. ದರ ನಿಗದಿ ಮಾಡಲಾಗಿತ್ತು. 2015-16 ರಲ್ಲಿ ಕೆಜಿಗೆ 306 ರೂನಂತೆ 709 ಮೆಟ್ರಿಕ್ ಟನ್ ತುಪ್ಪ ಪೂರೈಸಲಾಗಿತ್ತು.
2016-18ರ ವರೆಗೆ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿತ್ತು. 2018-19ರಲ್ಲಿ 85 ಮೆಟ್ರಿಕ್ ಟನ್ ನಂದಿನಿ ತುಪ್ಪ ಪೂರೈಸಲಾಗಿತ್ತು. ಈ ವೇಳೆ ಪ್ರತಿ ಕೆಜಿ ತುಪ್ಪಕ್ಕೆ 324 ರೂ. ದರ ನಿಗದಿ ಪಡಿಸಲಾಗಿತ್ತು. ಇನ್ನು 2019-20 ರಲ್ಲಿ ಕೆಜಿಗೆ 368 ರೂ.ನಂತೆ 1,408 ಮೆಟ್ರಿಕ್ ಟನ್ ತುಪ್ಪ ರವಾನೆಯಾಗಿತ್ತು. ಮತ್ತೆ 2020-21ರಲ್ಲಿ ತುಪ್ಪ ಪೂರೈಕೆ ಸ್ಥಗಿತಗೊಂಡಿತ್ತು. 2021-22ರಲ್ಲಿ ಕೆಜಿಗೆ 392 ರೂ.ನಂತೆ 345 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಲಾಗಿತ್ತು.
2022-23 ಸಾಲಿನ ಟಿಟಿಡಿ ಟೆಂಡರ್ನಲ್ಲಿ ಕೆಎಂಎಫ್ ಪ್ರತಿ ಕೆಜಿ ತುಪ್ಪಕ್ಕೆ ಸುಮಾರು 450 ರೂ. ದರ ನಿಗದಿ ಮಾಡಿ ಬಿಡ್ ಮಾಡಿತ್ತು. ಟೆಂಡರ್ನಲ್ಲಿ ಬೇರೆ ಕಂಪನಿಗಳು ಕೆಎಂಎಫ್ ಗಿಂತಲೂ ಕಡಿಮೆ ದರದ ಬಿಡ್ ಮಾಡಿದ್ದವು. ಹೀಗಾಗಿ, ನಂದಿನಿ ತುಪ್ಪ ಬದಲಿಗೆ ಕಡಿಮೆ ಬಿಡ್ ಮಾಡಿದ್ದ ಕಂಪನಿಯಿಂದ ಟಿಟಿಡಿ ತುಪ್ಪ ಖರೀದಿಸಿತ್ತು. ಹೀಗಾಗಿ 2023ರಿಂದ ಟಿಟಿಡಿ ಕೆಎಂಎಫ್ನಿಂದ ನಂದಿನಿ ತುಪ್ಪದ ಖರೀದಿ ಸ್ಥಗಿತಗೊಳಿಸಿತ್ತು.
ಇದೀಗ 350 ಮೆಟ್ರಿಕ್ ಟನ್ ನಂದಿನಿ ತುಪ್ಪಕ್ಕೆ ಆರ್ಡರ್: 2024-25ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಇಟ್ಟಿದೆ. ಹೀಗಾಗಿ ಇದೀಗ ಕೆ.ಜಿಗೆ 470 ರೂ. ದರದಂತೆ ಮತ್ತೆ ತಿರುಮಲ ಲಡ್ಡುಗೆ ನಂದಿನಿ ತುಪ್ಪ ಸರಬರಾಜಾಗಲಿದೆ.
ಈ ಬಗ್ಗೆ ಮಾತನಾಡಿರುವ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ನಮಗೆ ತಿರುಪತಿಯಿಂದ ತುಪ್ಪಕ್ಕೆ ಬೇಡಿಕೆ ಇದೆ. ಈ ತಿಂಗಳು 350 ಮೆಟ್ರಿಕ್ ಟನ್ ತುಪ್ಪಕ್ಕೆ ತಿರುಪತಿ ಆಡಳಿತ ಮಂಡಳಿ ಆರ್ಡರ್ ಕೊಟ್ಟಿದೆ. ಅಷ್ಟೂ ಪ್ರಮಾಣದ ತುಪ್ಪವನ್ನು ನಾವು ಸರಬರಾಜು ಮಾಡುತ್ತೇವೆ. ಬೆಂಗಳೂರಿನಿಂದಲೇ ನಂದಿನಿ ತುಪ್ಪವನ್ನು ಪೂರೈಕೆ ಮಾಡ್ತೇವೆ. ಹಸು ತುಪ್ಪಕ್ಕೆ ಬೇಡಿಕೆ ಬಂದಿದೆ. ಅದನ್ನೇ ನಾವು ಅಲ್ಲಿಗೆ ಪೂರೈಸ್ತೇವೆ. ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದಿನ ಸರ್ಕಾರದಲ್ಲಿ ತಿರುಮಲ ಅಪವಿತ್ರ, ಈಗ ಪವಿತ್ರೀಕರಣ ಆರಂಭ: ಆಂಧ್ರ ಸಿಎಂ ನಾಯ್ಡು - Tirumala Temple