ಮಂಗಳೂರು: "ನಮ್ಮ ಮತದಾನ ನಮ್ಮ ಅಸ್ತಿತ್ವ. ಐದು ವರ್ಷಗಳಿಗೊಮ್ಮೆ ಸಿಗುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಯಾರು ಈ ಅವಕಾಶವನ್ನು ಬಳಸಿಕೊಳ್ಳುವುದಿಲ್ಲವೋ, ಯಾರು ಮಾತದಾನ ಮಾಡುವುದಿಲ್ಲವೋ ಅವರು ನಿಜವಾದ ದೇಶದ್ರೋಹಿಗಳು" ಎಂದು ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಹೇಳಿದ್ದಾರೆ.
ನಿರ್ದಿಗಂತದ ವತಿಯಿಂದ ಅಸ್ತಿತ್ವದ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ ಆರು ದಿನಗಳ ಕಾಲ ಹಮ್ಮಿಕೊಂಡಿರುವ 'ನೇಹದ ನೇಯ್ಗೆ' ರಂಗೋತ್ಸವಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
"ಸಮಾಜದಲ್ಲಿ ಅಶಾಂತಿಯ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಕಲಾವಿದನಿಗೆ ರಂಗಭೂಮಿಯೇ ಅತ್ಯುತ್ತಮ ಮಾರ್ಗ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸವಾಗಲಿ" ಎಂದರು.
"ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿಯವರಂಥ ಸರಳ, ಸಜ್ಜನಿಕೆಯ ರಾಜಕಾರಣಿ ನಮ್ಮೊಂದಿಗಿದ್ದರು. ಇಂದು ಕಾಲ ಬದಲಾಗಿದೆ. ರಾಜಕೀಯ ರಂಗದ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇದೆಲ್ಲವನ್ನೂ ರಂಗಭೂಮಿಯಲ್ಲಿ ಮಾತನಾಡುವಂತಾಗಬೇಕು. ರಂಗಭೂಮಿಗೆ ಆ ತಾಕತ್ತಿದೆ. ಅದರಲ್ಲಿ ಯಶಸ್ಸು ಪಡೆಯಬಹುದೋ ಇಲ್ಲವೋ ಅದು ಬೇರೆ ಮಾತು. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು" ಎಂದು ಅಭಿಪ್ರಾಯಪಟ್ಟರು.
"ಪರಸ್ಪರ ಎಲ್ಲಾ ಧರ್ಮಗಳನ್ನು ಗೌರವಿಸಿದರೆ ಜಗಳಕ್ಕೆ ಆಸ್ಪದವೇ ಇರುವುದಿಲ್ಲ. ಸಮಾಜದಲ್ಲಿ ತಲೆದೋರುತ್ತಿರುವ ಭಿನ್ನಾಭಿಪ್ರಾಯಗಳ, ಜಗಳಗಳು ಅಂತ್ಯವಾಗುತ್ತವೆ. ಎಲ್ಲವೂ ನಮ್ಮ ಕೈಯಲ್ಲೇ ಇದೆ. ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಅಷ್ಟೇ" ಎಂದು ನುಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದಿಯಾ?: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ