ಬೆಂಗಳೂರು: ಕಳೆದ ಶುಕ್ರವಾರ ಶ್ವಾಸಕೋಶದ ಕ್ಯಾನ್ಸರ್‌ನಿಂದ ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗಿದ್ದು, ಅವರ ಅನುಪಸ್ಥಿತಿಯು ನಮ್ಮ ಮೆಟ್ರೋ ಸಂಸ್ಥೆಯನ್ನು ಬಹುವಾಗಿ ಕಾಡುತ್ತಿದೆ. ಸದ್ಯ ಮೆಟ್ರೋಗಳಲ್ಲಿ ಕೇಳುವ ಅಪರ್ಣಾ ಧ್ವನಿ ಮುಂದುವರಿಲಿದೆ. ಆದರೆ ಹೊಸ ಮಾರ್ಗಗಳಿಗಾಗಿ ಬಿಎಂಆರ್‌ಸಿಎಲ್ ಕಂಚಿನ ಕಂಠ ಹುಡುಕಬೇಕಾಗಿದೆ.
ನಮ್ಮ ಮೆಟ್ರೋ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಕನ್ನಡದಲ್ಲಿ ಕೇಳಲಾಗುತ್ತಿದ್ದ ಅಪರ್ಣಾ ಧ್ವನಿಯು ಈಗ ಮರೆಯಾಗಿದ್ದು, ಹೊಸ ಮಾರ್ಗಗಳಿಗಾಗಿ ಹೊಸ ಧ್ವನಿಯನ್ನು ಹುಡುಕುವ ಕಾಯಕದಲ್ಲಿ ಸಂಸ್ಥೆ ನಿರತವಾಗಿದೆ. ಇದಕ್ಕಾಗಿ ಕನ್ನಡದ ಎಫ್‌ಎಂ ರೆಡಿಯೋ ಜಾಕಿಗಳ, ನಿರೂಪಕರ ಹಾಗೂ ಹಾಡುಗಾರರ ಧ್ವನಿಯ ಮಾದರಿಯನ್ನು ಪಡೆದುಕೊಂಡಿದೆ.
ಹಳದಿ ಮಾರ್ಗದ ಆರ್‌ವಿ ರೋಡ್ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ ಈಗ ಅಪರ್ಣಾ ಇಹಲೋಕ ತ್ಯಜಿಸಿದ ಹಿನ್ನೆಲೆ ಹೊಸ ಧ್ವನಿಗಾಗಿ ಹುಡುಕಾಟ ನಡೆದಿದೆ. ಸಾಕಷ್ಟು ಜನರು ನಾವು ಧ್ವನಿ ಕೊಡುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ.
ಮೆಟ್ರೋ ಹೊಸ ಮಾರ್ಗಗಳಿಗೆ ಯಾರ ಧ್ವನಿ ಹಾಕಿದರೆ ಸೂಕ್ತ ಎಂದು ರೆಡಿಯೋ ಜಾಕಿ, ಕನ್ನಡದ ಆ್ಯಂಕರ್ ಹಾಗೂ ಸಿಂಗರ್ ಧ್ವನಿಗಳನ್ನು ಹುಡುಕಲಾಗುತ್ತಿದೆ. ಈಗಾಗಲೇ ಉದ್ಘಾಟನೆ ಆಗಿರುವ ಮಾರ್ಗದಲ್ಲಿರುವ ಅಪರ್ಣಾ ಧ್ವನಿ ಬದಲಾಗುವುದಿಲ್ಲ. ಚಲ್ಲಘಟ್ಟ-ವೈಟ್ ಫೀಲ್ಡ್, ಸಿಲ್ಕ್ ಇನ್ಸ್ಟಿಟ್ಯೂಟ್ - ನಾಗಸಂದ್ರ ಮಾರ್ಗದಲ್ಲಿ ಧ್ವನಿ ಮುಂದುವರಿಯಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ತಾಂತ್ರಿಕ ದೋಷ ಸರಿಪಡಿಸಿದ ಬಿಎಂಆರ್‌ಸಿಎಲ್; ನೇರಳೆ ಮಾರ್ಗದ ಮೆಟ್ರೋ ಸಂಚಾರ ಯಥಾಸ್ಥಿತಿಗೆ - Namma metro