ಹಾವೇರಿ: ಹಾವೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದ್ದು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ನಗರಸಭೆಯಲ್ಲಿ
ಬಹುಮತ ಇದ್ದರೂ ಸಹ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನದ ಗದ್ದಿಗೆ ಕಾಂಗ್ರೆಸ್ ಕೈ ತಪ್ಪಿದೆ. ಬಿಜೆಪಿ ಅಭ್ಯರ್ಥಿ ಶಶಿಕಲಾ ರಾಮು ಮಾಳಗಿ 17 ಮತ ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸದ ಬೊಮ್ಮಾಯಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಸೋಲಿಗೆ ಕಾರಣಗಳೇನು?: ಕಾಂಗ್ರೆಸ್ ಅಭ್ಯರ್ಥಿ ರೇಣುಕಾ 11 ಮತ ಪಡೆದು ಪರಾಜಿತರಾಗಿದ್ದಾರೆ. ಮತದಾನ ಪ್ರಕ್ರಿಯಲ್ಲಿ ಕಾಂಗ್ರೆಸ್ನ 6 ಸದಸ್ಯರು ಗೈರಾಗುವ ಮೂಲಕ ಹಾವೇರಿ ನಗರಸಭೆ ಬಿಜೆಪಿಗೆ ತೆಕ್ಕೆಗೆ ಸೇರಲು ಪರೋಕ್ಷವಾಗಿ ನೆರವಾದರು. 34 ಸದಸ್ಯರ ಸಂಖ್ಯೆ ಹೊಂದಿರುವ ಹಾವೇರಿ ನಗರಸಭೆಯಲ್ಲಿ 15 ಸದಸ್ಯರು ಕಾಂಗ್ರೆಸನವರಿದ್ದಾರೆ. 19 ಜನ ಬಿಜೆಪಿಯವರಿದ್ದು 7 ಪಕ್ಷೇತರರಿದ್ದರು. ಇದಲ್ಲದೇ ಸ್ಥಳೀಯ ಶಾಸಕ, ವಿಧಾನಪರಿಷತ್ ಸದಸ್ಯ ಮತ್ತು ಸಂಸದರನ್ನು ಹಿಡಿದು 34 ಸಂಖ್ಯಾಬಲವನ್ನು ಹಾವೇರಿ ನಗರಸಭೆ ಹೊಂದಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ 15 ಸದಸ್ಯರಲ್ಲಿ ಆರು ಮೆಂಬರ್ಸ್ ಗೈರಾಗಿದ್ದು, ಬಿಜೆಪಿಯವರಿಗೆ ವರದಾನವಾಗಿ ಪರಿಣಮಿಸಿದೆ. ಗೈರಾದ ಕಾಂಗ್ರೆಸ್ ಸದಸ್ಯರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಪಕ್ಷದ ನಾಯಕರಿಗೆ ಪತ್ರ ಬರೆದಿರುವದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದ್ದಾರೆ.