ಉಡುಪಿ: ವಿಶೇಷ ಸಂಭ್ರಮ, ಸಡಗರ ಹಾಗು ಭಕ್ತಿ-ಭಾವದಿಂದ ಆಚರಿಸಲಾಗುವ ಹಬ್ಬವೆಂದರೆ ಅದು ನಾಗರ ಪಂಚಮಿ. ಈ ದಿನ ನಾಗರ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗನ ಕಲ್ಲುಗಳಿಗೆ ಶಾಸ್ತ್ರೋಕ್ತ ಪೂಜೆ ನಡೆಯುತ್ತದೆ.
ನಾಗ ದೇವರ ಆಶೀರ್ವಾದ ಪಡೆಯುವುದು ಮತ್ತು ದುಷ್ಟರಿಂದ ರಕ್ಷಣೆ ಪಡೆದುಕೊಳ್ಳಲು ಜನರು ನಾಗನಿಗೆ ಹಾಲು, ಹೂವು, ಹಣ್ಣು ಅರ್ಪಿಸುತ್ತಾರೆ. ನಾಗರ ಹಾವುಗಳು ಹಾಗು ನಾಗದೇವರ ಕಲ್ಲುಗಳ ಮೂರ್ತಿಗಳಿಗೆ ಪೂಜಿಸುವುದರಿಂದ ಜಾತಕದಲ್ಲಿನ ಸರ್ಪ ದೋಷಗಳೂ ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ.
ಶ್ರಾವಣ ಮಾಸದ ಮೊದಲ ಹಬ್ಬ: ಕರಾವಳಿ ಜಿಲ್ಲೆಗಳೂ ಸೇರಿದಂತೆ ವಿವಿಧೆಡೆ ನಾಗನನ್ನು ಆರಾಧಿಸಲಾಗುತ್ತಿದೆ. ನಾಗದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಭಕ್ತರು ನಾಗದೇವರ ಸನ್ನಿಧಾನಕ್ಕೆ ಭೇಟಿ ನೀಡಿ, ಆರಾಧಿಸಿ ತನು ಎರೆದು ಮನೆಯಲ್ಲಿ ಸಿಹಿ ತಿಂಡಿ ಮಾಡಿ ಸಂಭ್ರಮಿಸುವರು.
ಮಹತ್ವ: ನಾಗರ ಪಂಚಮಿ ಹಬ್ಬದಲ್ಲಿ ಸರ್ಪಕ್ಕೆ ಪೂಜೆ. ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಸಹ ಪರಿಗಣಿಸಲಾಗುತ್ತದೆ. ಹೀಗಾಗಿ ನಾಗನನ್ನು ಪೂಜಿಸಿದರೆ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬುತ್ತದೆ. ಸಿಯಾಳ, ಹಾಲು, ಸಕ್ಕರೆಗಳಿಂದ ಅಭಿಷೇಕ ಮಾಡಿ ಅರಿಶಿನ, ಸಿಂಗಾರ, ಮಲ್ಲಿಗೆ, ವಿವಿಧ ಹೂವುಗಳಿಂದ ಅಲಂಕರಿಸಿ, ಮಂಗಳಾರತಿ ಬೆಳಗಿ ಭಕ್ತಾಧಿಗಳಿಗೆ ಪ್ರಸಾದ ನೀಡುವುದು ಪದ್ಧತಿ.
ಹೂವುಗಳ ದರ ಏರಿಕೆ: ನಾಗನಿಗೆ ಇಷ್ಟವಾದ ಕೇದಗೆ ಹೂವು ಹಾಗೂ ಗೆಂದಾಳೆ (ಸಿಯಾಳ) ಬೊಂಡದ ಬೆಲೆ ದುಬಾರಿಯಾಗಿದೆ. ಗೆಂದಾಳೆ ಬೊಂಡವೊಂದಕ್ಕೆ 60 ರೂ. ಇದ್ದರೆ, ಊರಿನ ಸಾಮಾನ್ಯ ಬೊಂಡಕ್ಕೆ 50 ರೂ. ಕೇದಗೆ ಸಣ್ಣದು 120 ರೂ., ಕೇದಗೆ ದೊಡ್ಡದಕ್ಕೆ 150 ರೂ, ಸ್ವರ್ಣ ಕೇದಗೆ 250 ರೂ ದರದಲ್ಲಿ ಮಾರಾಟವಾಗುತ್ತಿದೆ. ಸಿಂಗಾರ ಸಣ್ಣದು, ದೊಡ್ಡದು ಎಲ್ಲದಕ್ಕೂ 200 ರೂ. ಬೆಲೆ ನಿಗದಿಯಾಗಿ ಬಿಟ್ಟಿತ್ತು. ಶಂಕರಪುರ ಮಲ್ಲಿಗೆ ದರ ದಿಢೀರ್ ಗಗನಕ್ಕೇರಿದ್ದು, 2 ವಾರಗಳ ಹಿಂದೆ (ಜುಲೈ 22) 1 ಅಟ್ಟೆಗೆ (4 ಚೆಂಡು) 280 ರೂ ಇದ್ದ ದರ ಆಗಸ್ಟ್ 7ರಂದು 2,100ಕ್ಕೆ ತಲುಪಿದೆ.
ಜೀವಂತ ಸರ್ಪನಿಗೆ ಮನೆಯಲ್ಲಿ ಪೂಜೆ: ಕಾಪು ಮಜೂರು ಗೋವರ್ಧನ್ ರಾವ್ ಅವರ ಮನೆಯಲ್ಲಿ ಮೂರು ಹಾಗೂ ಸಾಲಿಗ್ರಾಮದ ಸುಧೀಂದ್ರ ಐತಾಳ್ ಅವರ ಮನೆಯಲ್ಲಿರುವ ಒಂದು ಜೀವಂತ ನಾಗರ ಹಾವುಗಳಿಗೆ ಇಂದು ವಿಶಿಷ್ಠ ಪೂಜೆ ನಡೆಯಿತು. ಇಬ್ಬರೂ ಉರಗ ರಕ್ಷಕರಾಗಿದ್ದು, ಗಾಯಗೊಂಡ, ವಾಹನಗಳ ಅಡಿಗೆ ಸಿಲುಕಿದ, ನಾಯಿ ಕಡಿತಕ್ಕೆ ತುತ್ತಾದ, ಪ್ರಾಣಿಗಳಿಂದ ಗಾಯಗೊಂಡ ಹಾವುಗಳ ಆರೈಕೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಕುರಿತು ಅರ್ಚಕ ಮಿಥುನ ಅಡಿಗ ಮಾತನಾಡಿ, "ನಾಗರಪಂಚಮಿಯ ಇಂದು ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಬರುವ ನಾಗರ ಪಂಚಮಿಗೆ ಬಹಳ ಮಹತ್ವವಿದೆ. ನಾಗದೇವರಿಗೆ ತನು, ಕ್ಷೀರಾಭಿಷೇಕ, ಪಂಚಾಮ್ರತ ಅಭಿಷೇಕ ಮಾಡಿದರೆ ನಮ್ಮ ಸಂಕಲ್ಪ, ಮನಸ್ಸಿನ ಅಭೀಷ್ಠೆಯನ್ನು ನಾಗದೇವರು ಅನುಗ್ರಹಿಸುತ್ತಾನೆ" ಎಂದು ತಿಳಿಸಿದರು.
ಇದನ್ನೂ ಓದಿ: ನಾಗರ ಪಂಚಮಿ: ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸಿದ ಮಹಿಳೆಯರು - Nagara Panchami Celebration