ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ನಡೆದ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮೀಷನ್ ಪಡೆಯಲಾಗಿದೆ ಎನ್ನುವ ಆರೋಪ ಸಂಬಂಧ ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಗಳ ಕುರಿತು ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡಿದ್ದೇವೆ. ಈವರೆಗೂ 228 ದೂರುಗಳನ್ನು ಸ್ವೀಕಾರ ಮಾಡಿದ್ದೇವೆ. ನಮ್ಮ ತನಿಖಾ ಹಂತದಲ್ಲಿ ಮಾಹಿತಿ ಸಂಗ್ರಹ ಮಾಡಿದ್ದೇವೆ. ಸ್ಪಾಟ್ ಇನ್ಸ್‌ಪೆಕ್ಷನ್ ಮಾಡಿ ವೈಜ್ಞಾನಿಕವಾಗಿ ತನಿಖೆ ನಡೆಸುತ್ತಿದ್ದೇವೆ. ನಾನು ಯಾವುದೇ ತನಿಖೆ ಮಾಹಿತಿ ನೀಡಲಾಗುವುದಿಲ್ಲ. ವರದಿ ನೀಡಲು ಮೇ ಕೊನೆಯವರೆಗೂ ನನಗೆ ಸಮಯ ಕೊಟ್ಟಿದ್ದಾರೆ. ಅಷ್ಟರಲ್ಲಿ ತನಿಖೆ ಮುಗಿಸಿ ವರದಿ ನೀಡುತ್ತೇನೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಈ ಹಿನ್ನೆಲೆ, ಕಾಂಗ್ರೆಸ್ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ.
ಇದನ್ನೂ ಓದಿ : 40% ಕಮಿಷನ್ ಆರೋಪ: ಕೆಂಪಣ್ಣ ಅವರು ನಾಗಮೋಹನ್ ದಾಸ್ ಸಮಿತಿಗೆ ದೂರು ನೀಡಲಿ-ಸಿಎಂ