ಮೈಸೂರು: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಗಳು ಜಲಾವೃತವಾಗಿದ್ದು, ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ನಗರದ ಅಶೋಕಪುರಂ ಬಡಾವಣೆಯ 27ನೇ ವಾರ್ಡ್ನಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿಯ ಕೊಳಚೆ ನೀರು ನುಗ್ಗಿದೆ. ಮಳೆ ಸೃಷ್ಟಿಸಿದ ಅವಾಂತರಕ್ಕೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ಬಡಾವಣೆಯಲ್ಲಿ ಚರಂಡಿಯ ವ್ಯವಸ್ಥೆ ಸರಿಯಿಲ್ಲದ ಕಾರಣ ಮಳೆಯ ನೀರೆಲ್ಲ ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದ ನಿವಾಸಿಗಳು ತುಂಬಾ ಪರದಾಡುವಂತಾಗಿದೆ. ಭಾರಿ ಮಳೆಯಾದರೆ, ಮನೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತವೆ. ನಮಗೆ ವಾಸಿಸಲು ಸಾಧ್ಯವಾಗುತ್ತಿಲ್ಲ. ದವಸ ಧಾನ್ಯಗಳು ನಾಶವಾಗಿ ಹೋಗಿವೆ. ನಮಗೆ ಊಟಕ್ಕೂ ಗತಿಯಿಲ್ಲದಂತಾಗಿದೆ. ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾರೊಬ್ಬರೂ ಕೂಡ ಚರಂಡಿ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಂದಂತಹ ಸಂದರ್ಭದಲ್ಲಿ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ಉಳಿದುಕೊಳ್ಳಲು ನಮಗೆ ವ್ಯವಸ್ಥೆ ಮಾಡಿಕೊಡಿ, ಇಲ್ಲವಾದಲ್ಲಿ ವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಮಾಡಿ ಮನೆಗಳಿಗೆ ನೀರು ನುಗ್ಗದಂತೆ ಕಾಮಗಾರಿ ನಡೆಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ಸಿಡಿಲು ಬಡಿದು ಯುವಕ ಸಾವು