ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗ ಕಮಲ ಹಾಗೂ ಕೈ ಗಳ ನಡುವೆ ನೇರ ಹಣಾಹಣಿಗೆ ಭೂಮಿಕೆ ಸಿದ್ಧವಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಮಹಾರಾಜರಾದ ಯದುವೀರ್ ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗ ಎಂ.ಲಕ್ಷ್ಮಣ್ ನಡುವೆ ನೇರ ಪೈಪೋಟಿ ಇದೆ. ಸಿದ್ದರಾಮಯ್ಯ ವರ್ಚಸ್ಸು ಹಾಗೂ ಮಹಾರಾಜರ ಜನಪ್ರಿಯತೆ ಹಾಗೂ ಮೋದಿ ಅವರ ನಾಮಬಲದ ನಡುವೆ ಚುನಾವಣೆ ನಡೆಯಲಿದೆ.
ಹಾಗಾದರೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇರುವ ಜಾತಿ ಲೆಕ್ಕಾಚಾರ ಏನು, ಒಟ್ಟು ಕ್ಷೇತ್ರಗಳ ವಿವರ ಹಾಗೂ ಒಟ್ಟು ಮತದಾರರ ವಿವರಗಳ ಜೊತೆಗೆ ಇಲ್ಲಿವರೆಗೆ ಕ್ಷೇತ್ರದಲ್ಲಿ ಗೆದ್ದ ಘಟಾನುಘಟಿಗಳು ಯಾರು ಎಂಬ ವಿವರ ಇಲ್ಲಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ಒಡೆಯರ್ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ಗೆ ಟಿಕೆಟ್ ಸಿಕ್ಕಿದೆ. ಲಕ್ಷ್ಮಣ್ ಒಕ್ಕಲಿಗ ಸಮುದಾಯದ ವ್ಯಕ್ತಿ. ಬಿಜೆಪಿಯಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಈ ಬಾರಿ ಲಕ್ಷ್ಮಣ್ ಅವರನ್ನು ಒಕ್ಕಲಿಗ ಜನಾಂಗ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ನದ್ದಾಗಿದೆ. ಮೋದಿ ನಾಮಬಲ ಹಾಗೂ ರಾಜರ ಜನಪ್ರಿಯತೆಯಿಂದ ಮತಗಳು ಸಿಗುವ ಲೆಕ್ಕಾಚಾರದಿಂದ ಬಿಜೆಪಿ ಈ ಬಾರಿ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
ಎರಡು ಪಕ್ಷಗಳಲ್ಲೂ ಲೆಕ್ಕಾಚಾರ: ಕಳೆದ ಎರಡು ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಬಿಜೆಪಿ, ಈಗ ಹ್ಯಾಟ್ರಿಕ್ ಸಾಧನೆಯ ಕಡೆ ದೃಷ್ಟಿ ಹಾಯಿಸಿದೆ. ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಆದರೆ, ಈ ಬಾರಿ ಬಿಜೆಪಿ ಜೊತೆ ನೇರವಾಗಿ ಜಾತ್ಯತೀತ ಜನತಾದಳ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಒಕ್ಕಲಿಗ ಮತದಾರರು ಯಾರ ಪರ ಎಂಬುದು ಕುತೂಹಲ ಮೂಡಿಸಿದೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಸರಳತೆ, ರಾಜಮನೆತನವು ಮೈಸೂರಿಗೆ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಪಕ್ಷಕ್ಕೆ ನೆರವಾಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಮತ್ತೊಂದಡೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ. ಲಕ್ಷ್ಮಣ್ ಒಕ್ಕಲಿಗ ಸಮುದಾಯದವರಾಗಿದ್ದು, ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಜನತೆಗೆ ಪರಿಚಿತರಾಗಿದ್ದಾರೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎಲ್ಲ ಸಮುದಾಯದ ಜನರು ಬೆಂಬಲ ನೀಡುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕಿದೆ.
ಮೈಸೂರು-ಕೊಡಗು ಜಾತಿವಾರು ಲೆಕ್ಕಾಚಾರ: ಸದ್ಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಲಭ್ಯವಾಗಿರುವ ಜಾತಿವಾರು ಅಂದಾಜು ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಇರುವ ಜಾತಿಗಳ ವಿವರ ಹೀಗಿದೆ.
ಒಕ್ಕಲಿಗ | 5.5 ಲಕ್ಷ |
ದಲಿತ | 3.20 ಲಕ್ಷ |
ಮುಸ್ಲಿಂ | 2 ಲಕ್ಷ |
ಕುರುಬ | 2.30 ಲಕ್ಷ |
ಲಿಂಗಾಯತ | 1.90 ಲಕ್ಷ |
ಬ್ರಾಹ್ಮಣ | 1.40 ಲಕ್ಷ |
ಕೊಡವ | 1.10 ಲಕ್ಷ, |
ನಾಯಕ | 2 ಲಕ್ಷ |
ಇತರ | 1.5 ಲಕ್ಷ |
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಒಟ್ಟು 8 ಕ್ಷೇತ್ರಗಳು: ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಮಡಿಕೇರಿ, ವಿರಾಜಪೇಟೆ.
ಶಾಸಕರ ಬಲಾಬಲ:
ಕಾಂಗ್ರೆಸ್ | 5 |
ಜೆಡಿಎಸ್ | 2 |
ಬಿಜೆಪಿ | 1 |
ಕೃಷ್ಣರಾಜ | ಬಿಜೆಪಿ |
ಹುಣಸೂರು | ಜೆಡಿಎಸ್ |
ಚಾಮುಂಡೇಶ್ವರಿ | ಜೆಡಿಎಸ್ |
ಪಿರಿಯಾಪಟ್ಟಣ | ಕಾಂಗ್ರೆಸ್ |
ಚಾಮರಾಜನಗರ | ಕಾಂಗ್ರೆಸ್ |
ನರಸಿಂಹರಾಜ | ಕಾಂಗ್ರೆಸ್ |
ಮಡಿಕೇರಿ | ಕಾಂಗ್ರೆಸ್ |
ವಿರಾಜಪೇಟೆ | ಕಾಂಗ್ರೆಸ್ |
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ವಿವರ: ಈ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚು ಇರುವುದು ವಿಶೇಷ.
ಪುರುಷರು | 10,17,120 |
ಮಹಿಳೆಯರು | 10,55,035 |
ಲಿಂಗತ್ವ ಅಲ್ಪ ಸಂಖ್ಯಾತರು | 182 |
ಒಟ್ಟು ಮತದಾರರು | 20,72,337 |
ಕ್ಷೇತ್ರ ಪುನರ್ ವಿಂಗಡಣೆ ನಂತರ ಗೆದ್ದವರು ಯಾರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ 2009ರ ಕ್ಷೇತ್ರ ಪುನರ್ ವಿಂಗಡಣೆ ಆದ ನಂತರ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ವರುಣಾ, ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದವು. ನಂತರ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಸಹ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾದ ನಂತರ ಮೈಸೂರು ನಗರದ ಕ್ಷೇತ್ರಗಳು ಹುಣಸೂರು, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಹಾಗೂ ಕೊಡಗಿನ ಮಡಿಕೇರಿ, ವಿರಾಜಪೇಟೆ ಮೈಸೂರು - ಕೊಡಗು ಕ್ಷೇತ್ರಕ್ಕೆ ಸೇರ್ಪಡೆ ಆದವು. ಅಂದು 2009ರಲ್ಲಿ ಕಾಂಗ್ರೆಸ್ನಿಂದ ಹೆಚ್.ವಿಶ್ವನಾಥ್ ಗೆಲುವು ಸಾಧಿಸಿದರೆ, 2014 ಹಾಗೂ 2019ರಲ್ಲಿ ಬಿಜೆಪಿಯಿಂದ ಪ್ರತಾಪ್ ಸಿಂಹ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿದ್ದಾರೆ 1,259 ಶತಾಯುಷಿ ಮತದಾರರು: ಮತದಾನದ ಬಗ್ಗೆ ಅವರು ಹೇಳಿದ್ದೇನು? - 1259 centenarian voters