ಮೈಸೂರು: ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಇಂದು ಎರಡನೇ ನಾಮಪತ್ರ ಸಲ್ಲಿಸಿದರು. ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ ಅವರೊಡನೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಯದುವೀರ್ ಅವರು, ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಏಪ್ರಿಲ್ 1 ರಂದು ತಾಯಿ ಪ್ರಮೋದಾ ದೇವಿ ಅವರ ಜೊತೆಗೆ ತೆರಳಿ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರಿಗೆ ಮೊದಲ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದರು. ಇದೀಗ ಇನ್ನೊಂದು ಸೆಟ್ ನಾಮಪತ್ರವನ್ನು ಪಕ್ಷದ ನಾಯಕರ ಜೊತೆಗೆ ಮೆರವಣಿಗೆಯಲ್ಲಿ ಆಗಮಿಸಿ ಸಲ್ಲಿಸಿದ್ದಾರೆ.
ಮೊದಲ ನಾಮಪತ್ರ ಸಲ್ಲಿಸುವ ವೇಳೆ ಅಫಿಡವಿಟ್ನಲ್ಲಿ ತಮ್ಮ, ಪತ್ನಿ ಹಾಗೂ ಪುತ್ರನ ಹೆಸರಿನಲ್ಲಿರುವ ಆಸ್ತಿ ವಿವರವನ್ನೂ ಸಲ್ಲಿಸಿದ್ದರು. ಈ ವೇಳೆ ಯದುವೀರ್ ಅವರು ರಾಜ ವಂಶಸ್ಥರಾಗಿದ್ದರೂ ಅವರ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ ಎನ್ನುವುದು ಗಮನಾರ್ಹವಾಗಿತ್ತು. ಯದುವೀರ್ ಅವರ ಬಳಿ ಯಾವುದೇ ಕೃಷಿ ಭೂಮಿ, ಸ್ವಂತ ಮನೆ, ವಾಣಿಜ್ಯ ಕಟ್ಟಡಗಳಿಲ್ಲ. ಯಾವುದೇ ಬ್ಯಾಂಕ್ಗಳಲ್ಲಿ ಸಾಲ ಪಡೆದಿಲ್ಲ. ಯದುವೀರ್ ಅವರ ಹೆಸರಿನಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಯದುವೀರ್ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಅವರ ಹೆಸರಿನಲ್ಲಿ 4 ಕೋಟಿ 99 ಲಕ್ಷದ 59 ಸಾವಿರದ 303 ರೂ., ಪತ್ನಿ ತ್ರಿಷಿಕಾ ಹೆಸರಿನಲ್ಲಿ 1 ಕೋಟಿ 4 ಲಕ್ಷದ 25 ಸಾವಿರ ರೂ. ಹಾಗೂ ಪುತ್ರ ಆದ್ಯವೀರ್ ಹೆಸರಿನಲ್ಲಿ 3 ಕೋಟಿ 63 ಲಕ್ಷದ 55 ಸಾವಿರದ 343 ರೂ. ಹೊಂದಿರುವುದಾ ಉಲ್ಲೇಖಿಸಿದ್ದರು.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬಿ.ಫಾರಂಗೆ ಪೂಜೆ ಸಲ್ಲಿಸಿದ ಎಂ. ಲಕ್ಷ್ಮಣ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಬುಧವಾರ ನಾಮಪತ್ರ ಸಲ್ಲಿಸುವ ಮುನ್ನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಚಾಮುಂಡಿ ತಾಯಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎಂ. ರಾಮು, ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಗಿರೀಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುತ್ತೂರು ಶ್ರೀ ಆಶೀರ್ವಾದ ಪಡೆದ ಲಕ್ಷ್ಮಣ್: ನಗರದ ಸುತ್ತೂರು ಮಠದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಶಾಸಕ ಕೆ.ಹರೀಶ್ ಗೌಡ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಕೆ. ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ತಾಯಿಯ ಆಶೀರ್ವಾದ ಪಡೆದೇ ಚುನಾವಣೆಗೆ ಸ್ಪರ್ಧೆ: 'ಈಟಿವಿ ಭಾರತ್' ಸಂದರ್ಶನದಲ್ಲಿ ಯದುವೀರ್ - Yaduveer Wodeyar