ಮೈಸೂರು: ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ಜಿಲ್ಲಾ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಿಸಿದೆ. 2023-24ನೇ ಸಾಲಿನ ಜೀವಮಾನ ಸಾಧನೆ, ಹಿರಿಯ ಪತ್ರಕರ್ತರು, ಛಾಯಾಗ್ರಾಹಕರು ಸೇರಿದಂತೆ ವರ್ಷದ ಕನ್ನಡ, ಇಂಗ್ಲಿಷ್ ವರದಿಗಳು, ಅತ್ಯುತ್ತಮ ಛಾಯಾಚಿತ್ರ ಹಾಗೂ ವಿದ್ಯುನ್ಮಾನ ವರದಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಈ ಸಾಲಿನಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಜೀವಮಾನ ಸಾಧನೆಗೆ ಹಿರಿಯ ಪತ್ರಕರ್ತ, ದಿನ ತಂತಿ ಪತ್ರಿಕೆಯ ಎಂ.ಎನ್.ಕಿರಣ್ ಕುರ್ಮಾ, ವರ್ಷದ ಹಿರಿಯ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿಗೆ ಸಾಲಿಗ್ರಾಮ ಯಶವಂತ್ (ಪ್ರಜಾವಾಣಿ ಹಿರಿಯ ವರದಿಗಾರರು), ಹಿರಿಯ ಸುದ್ದಿ ಸಂಪಾದಕ ಪ್ರಶಸ್ತಿಗೆ ಕೆ.ಎನ್.ನಾಗಸುಂದ್ರಪ್ಪ (ವರ್ತಮಾನ್ ದಿನಪತ್ರಿಕೆ ಸುದ್ದಿ ಸಂಪಾದಕರು), ಹಿರಿಯ ಛಾಯಾಗ್ರಾಹಕ ಪ್ರಶಸ್ತಿಗೆ ಶ್ರೀರಾಮ್ (ದಿ ಹಿಂದು ದಿನಪತ್ರಿಕೆ), ದೃಶ್ಯ ಮಾಧ್ಯಮ ಪ್ರಶಸ್ತಿಗೆ ಮಹೇಶ್ ಶ್ರವಣಬೆಳಗೊಳ (ಈಟಿವಿ ಭಾರತ್ ಹಿರಿಯ ವರದಿಗಾರ), ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಾಫರ್ ಪ್ರಶಸ್ತಿಗೆ ನಾಗೇಶ್.ಎಸ್ (ವಿಸ್ತಾರ ಟಿವಿ) ಅವರನ್ನು ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರು: ಈ ಸಾಲಿನ ಉತ್ತಮ ಕನ್ನಡ ವರದಿಗೆ ಹೆಚ್.ಎಸ್.ಸಚೀತ್ (ಪ್ರಜಾವಾಣಿ ಪತ್ರಿಕೆ), ಇಂಗ್ಲಿಷ್ ವರದಿಗೆ ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ, ಡೆಕ್ಕನ್ ಹೆರಾಲ್ಡ್) ಉತ್ತಮ ಫೋಟೋಗ್ರಾಫಿಗೆ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ) ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಜಯಂತ್ ಮತ್ತು ರಾಮು (ದೂರದರ್ಶನ) ಭಾಜನರಾಗಿದ್ದಾರೆ.
ಸೆ.21ರಂದು ನಡೆಯುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.