ಮೈಸೂರು: ಬಿಜೆಪಿ ಮೇಲಿನ ನಿಷ್ಠೆಗೆ ಕನ್ನಡಿಗನಿಗೆ ಮೇಘಾಲಯದ ರಾಜ್ಯಪಾಲನಾಗುವ ಅದೃಷ್ಟ ಒಲಿದು ಬಂದಿದ್ದು, ಮೈಸೂರು ಭಾಗಕ್ಕೆ ಮೋದಿ ಗಿಫ್ಟ್ ಕೊಟ್ಟಿದ್ದಾರೆ.
40ವರ್ಷಗಳ ಹಾವೇರಿ ಜಿಲ್ಲೆ ಬ್ಯಾಡಗಿಯಿಂದ ಉದ್ಯೋಗ ಅರಸಿ ಮೈಸೂರಿನ ಹುಣಸೂರಿಗೆ ವಿಜಯಶಂಕರ್, ತಮ್ಮ ಬಾವ ನಡೆಸುತ್ತಿದ್ದ ಸಿಮೆಂಟ್ ವ್ಯಾಪಾರದಲ್ಲಿ ಕೈ ಜೋಡಿಸಿದರು. ವ್ಯಾಪಾರವೂ ಕೈ ಹಿಡಿಯಿತು. ವ್ಯಾಪಾರದೊಂದಿನ ನಂಟು ನಿಧಾನವಾಗಿ ರಾಜಕೀಯದತ್ತ ಹೊರಳಿಸಿತು. ಶಾಸಕರು, ಸಚಿವರು, ಸಂಸದರೂ ಆದರು. ಈಗ ರಾಜ್ಯಪಾಲರ ಹುದ್ದೆಗೆ ಏರಿದ್ದಾರೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಿ.ಹೆಚ್.ವಿಜಯಶಂಕರ್ ಈಗಾಗಲೇ ವಿವಿಧ ಹುದ್ದೆಯನ್ನು ಅಲಂಕರಿಸಿದ್ದಾರೆ. 1994ರಲ್ಲಿ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಹೆಚ್. ವಿಜಯಶಂಕರ್ 1998 ಹಾಗೂ 2004 ರಲ್ಲಿ ಮೈಸೂರು ಸಂಸದರಾಗಿ ಸೇವೆ ಸಲ್ಲಿಸಿದ್ದರು. 2010 ರಿಂದ 2012 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ಯಾಬಿನೆಟ್‌ನಲ್ಲಿ 2010 ರಿಂದ 2011ರ ವರೆಗೆ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಬದಲಾದ ರಾಜಕೀಯ: 2014ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರತಾಪ ಸಿಂಹ ಅವರಿಗೆ ದೊರೆತ ಹಿನ್ನೆಲೆಯಲ್ಲಿ ಕ್ಷೇತ್ರ ತ್ಯಾಗ ಮಾಡಬೇಕಾದ ಪರಿಸ್ಥಿತಿಗೆ ಸಿಲುಕಿದ ಸಿ.ಹೆಚ್. ವಿಜಯಶಂಕರ್, ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತ್ತಿದ್ದರು.
ನಂತರ ಪಕ್ಷದ ಕೆಲ ಮುಖಂಡರ ವರ್ತನೆ ವಿರೋಧಿಸಿ ಕಾಂಗ್ರೆಸ್ ಸೇರಿ, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ ಮರಳಿ ಬಿಜೆಪಿ ಸೇರಿ, 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಆ ಬಳಿಕ ಪಕ್ಷದ ಚಟುಚಟಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮೇಘಾಲಯದ ರಾಜ್ಯಪಾಲರ ಹುದ್ದೆ ಲಭಿಸಿದೆ.
ರಾಜ್ಯಪಾಲ ಹುದ್ದೆ ಲಭಿಸುವ ನಿರೀಕ್ಷೆ ನನಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕೃಪಾಕಟಾಕ್ಷದಿಂದ ಮೇಘಾಲಯದ ರಾಜ್ಯಪಾಲರ ಹುದ್ದೆ ದೊರೆತಿದೆ ಎಂದು ಮೇಘಾಲಯ ನಿಯೋಜಿತ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾತ್ರಿ ಹೊರಡಿಸಿದ ರಾಜ್ಯಪಾಲರ ಆಯ್ಕೆ ಕುರಿತ ಆದೇಶದಲ್ಲಿ ಮೇಘಾಲಯದ ರಾಜ್ಯಪಾಲರಾಗಿ ಮೈಸೂರಿನ ಹಿರಿಯ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಮೈಸೂರಿನ ವಿಜಯನಗರದಲ್ಲಿರುವ ಸಿ.ಹೆಚ್. ವಿಜಯ್‌ಶಂಕರ್ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ.
ಭಾನುವಾರ ಬೆಳಗ್ಗೆಯಿಂದಲೇ ಅಭಿಮಾನಿಗಳು, ಮುಖಂಡರು ವಿಜಯ್‌ಶಂಕರ್ ನಿವಾಸಕ್ಕೆ ತೆರಳಿ ಶುಭ ಕೋರಿದರು.
ಇದನ್ನೂ ಓದಿ: ಮುಡಾ ಹಗರಣ ಮುಚ್ಚಿ ಹಾಕಲು ನ್ಯಾ.ದೇಸಾಯಿ ಆಯೋಗ ರಚನೆ: ಹೆಚ್.ಡಿ. ಕುಮಾರಸ್ವಾಮಿ - HDK outrage against Siddaramaiah