ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದಕ ಸಂಸ್ಥೆ KSDL ಮತ್ತೊಂದು ಮಹತ್ತರ ಸಾಧನೆ ಮಾಡಿದೆ. ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವಂತೆ 4 ದಶಕಗಳಲ್ಲೇ ಅತ್ಯಧಿಕ ಎನಿಸುವ ರೂ. 1,500 ಕೋಟಿ ವಹಿವಾಟು ನಡೆಸಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅವರು "ರಾಜ್ಯದ ಉದ್ಯಮಗಳನ್ನು ಉಳಿಸಿ, ಬೆಳೆಸುವಲ್ಲಿ ನಮ್ಮ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಮತ್ತು ಈ ಅಭಿವೃದ್ಧಿಯ ಪರ್ವ ಮುಂದುವರೆಯಲಿದೆ" ಎಂದಿದ್ದಾರೆ. ಪಾರಂಪರಿಕ ಹೆಗ್ಗುರುತಾಗಿರುವ ಮೈಸೂರು ಸ್ಯಾಂಡಲ್ ಸೋಪ್ಗೆ ವಿಶ್ವದಾದ್ಯಂತ ಗ್ರಾಹಕರಿದ್ದಾರೆ. ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್)ನಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನವಾಗಿದೆ. ಸರ್ಕಾರದ ಸಂಸ್ಥೆಯಾಗಿ ಲಾಭ ಗಳಿಕೆ ಮಾಡುತ್ತಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಷಯವಾಗಿದೆ ಎಂದು ಮಧ್ಯಮ ಕೈಗಾರಿಕೆಗಳ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಕಳೆದ 40 ವರ್ಷಗಳಲ್ಲಿ ಗರಿಷ್ಠ ಮಾರಾಟ ವಹಿವಾಟು ದಾಖಲಿಸಿದೆ. ಮಾರ್ಚ್ 2024ರ ವೇಳೆಗೆ 1,500 ಕೋಟಿ ರೂ.ಗಳನ್ನು ಮೀರಿ ವಹಿವಾಟು ನಡೆಸಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ 195 ಕೋಟಿ ರೂಪಾಯಿ ಏರಿಕೆಯಾಗಿದ್ದು, ಇದು ಶೇಕಡಾ 14.25 ರಷ್ಟು ಬೆಳವಣಿಗೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೆಎಸ್‌ಡಿಎಲ್ ಸಂಸ್ಥೆ ಶವರ್ ಜೆಲ್‌ಗಳು, ಮೈಸೂರು ಸ್ಯಾಂಡಲ್ ವೇವ್ ಡಿಯೋ ಸೋಪ್, ಗ್ಲಿಸರಿನ್ ಆಧಾರಿತ ಪಾರದರ್ಶಕ ಸ್ನಾನದ ಬಾರ್ ಮತ್ತು ಸೂಪರ್ ಪ್ರೀಮಿಯಂ ಬಾತ್ ಸೋಪ್ ಸೇರಿದಂತೆ 21 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಉತ್ಪನ್ನಗಳಲ್ಲಿ ಮೈಸೂರು ಸ್ಯಾಂಡಲ್ ಮಿಲೇನಿಯಂ ಗೋಲ್ಡ್ ವಿಶೇಷತೆ ಹೊಂದಿದ್ದು, 100 ಗ್ರಾಂ ಸೋಪಿನ ಬೆಲೆ 1,000 ರೂಪಾಯಿ ಇದೆ. ಮೈಸೂರು ಸ್ಯಾಂಡಲ್ ಸೋಪ್ ತನ್ನ ಸಾಬೂನುಗಳಲ್ಲಿ ಶುದ್ಧ ಶ್ರೀಗಂಧದ ಎಣ್ಣೆಯನ್ನು ಬಳಸುವುದಕ್ಕೆ ಹೆಸರುವಾಸಿಯಾಗಿದೆ.
ಸರ್ಕಾರದ ಸ್ವಾದೀನದಲ್ಲಿರು ಕಂಪನಿ ಉತ್ತಮ ವಹಿವಾಟು ನಡೆಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವೂ ಹೌದು.
ಇದನ್ನೂ ಓದಿ: ಏಕಕಾಲಕ್ಕೆ ಕೆಎಸ್ಡಿಎಲ್ನ 21 ಹೊಸ ಉತ್ಪನ್ನ ಬಿಡುಗಡೆ: ಗುಣಮಟ್ಟ ಕಾಪಾಡಿಕೊಳ್ಳಲು ಸಿಎಂ ಸಲಹೆ