ಗಂಗಾವತಿ (ಕೊಪ್ಪಳ) : ಮಾನವೀಯತೆ ಎಂಬುವುದು ಧರ್ಮ - ಜಾತಿ, ಮತ - ಪಂಥಗಳನ್ನು ಮೀರಿದ್ದು ಎಂಬುವುದಕ್ಕೆ ಆಗಾಗ ಇಂತಹ ಕೆಲ ಘಟನೆಗಳು ಸಾಬೀತು ಮಾಡುತ್ತಲೇ ಇರುತ್ತವೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಗಂಗಾವತಿಯಲ್ಲಿ ನಡೆದಿದೆ. ಅನಾರೋಗ್ಯಕ್ಕೀಡಾದ ಅರ್ಚಕರೊಬ್ಬರಿಗೆ ಮುಸ್ಲಿಂ ಯುವಕನೊಬ್ಬ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕರಾಂಪೂರದಲ್ಲಿರುವ ವಿಶ್ವವಿಖ್ಯಾತ ಅಂಜನಾದ್ರಿ ದೇಗುಲದ ಅರ್ಚಕ ಶ್ರೀನಿವಾಸ ಎಂಬುವವರು ಅನಾರೋಗ್ಯಕ್ಕೀಡಾಗಿ ತಾಲೂಕಿನ ಶ್ರೀರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಗುಲದ ಅರ್ಚಕ ರಕ್ತದ ಕೊರತೆಯಿಂದ ಬಳಲುತ್ತಿದ್ದಾರೆ. ಅರ್ಚಕನಿಗೆ ರಕ್ತದ ಅವಶ್ಯಕತೆ ಇದೆ ಎಂಬ ಬಗ್ಗೆ`ಗಂಗಾವತಿಯ ರಕ್ತದಾನಿಗಳು' ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಗಮನಿಸಿದ ಗಂಗಾವತಿ ನಗರದ 19ನೇ ವಾರ್ಡ್ನ ನಿವಾಸಿ ಹಾಗೂ ಖಾಸಗಿ ಶಾಲೆಯ ಶಿಕ್ಷಕ ಮೈನುದ್ದೀನ್ ಕರ್ನೂಲ್ ಎಂಬ ಯುವಕ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಸ್ಥಳೀಯ ಅಂಜನಾದ್ರಿ ಬ್ಲಡ್ ಬ್ಯಾಂಕಿಗೆ ತೆರಳಿದ ಮೈನುದ್ದೀನ್ ರಕ್ತದಾನ ಮಾಡಿ, ಸ್ನೇಹಿತರ ಮೂಲಕ ಅರ್ಚಕ ಶ್ರೀನಿವಾಸ ಅವರಿಗೆ ತಲುಪಿಸಿದ್ದಾರೆ. ವೈದ್ಯರು ರಕ್ತವನ್ನು ಶ್ರೀನಿವಾಸ ಅವರಿಗೆ ಹಾಕಿದ್ದು, ಇದೀಗ ಅರ್ಚಕನ ಆರೋಗ್ಯದಲ್ಲಿ ಕೊಂಚ ಪ್ರಮಾಣದ ಚೇತರಿಕೆ ಕಾಣಿಸಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಎಸ್ಎಸ್ ಸ್ಥಳೀಯ ಮುಖಂಡ ಸೈಯದ್ ಅಲಿ, ಮಾನವೀಯತೆ ಎಂಬುವುದು ಎಲ್ಲವನ್ನೂ ಮೀರಿದ್ದು. ಆಪತ್ಕಾಲದಲ್ಲಿರುವ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಮಾಡುವ ಸಹಾಯವೇ ಶ್ರೇಷ್ಠ ಧರ್ಮ. ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿ ಎಂದರು.
ಅಂಜನಾದ್ರಿ ದೇಗುಲದ ವ್ಯವಸ್ಥಾಪಕರು ಹೇಳಿದ್ದಿಷ್ಟು: ಅಂಜನಾದ್ರಿ ದೇಗುಲದ ವ್ಯವಸ್ಥಾಪಕ ವೆಂಕಟೇಶ್ ಸಣಾಪುರ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ’‘ಅರ್ಚಕ ಶ್ರೀನಿವಾಸ್ ಅವರಿಗೆ ಸನೀಹದಲ್ಲಿ ಯಾರೂ ಬಂಧು - ಬಳಗವಿಲ್ಲ. ಹೀಗಾಗಿ ಅವರ ಕಾಳಜಿಯನ್ನ ನಾವೇ ಮಾಡುತ್ತೇವೆ. ಅನಾರೋಗ್ಯಕ್ಕೀಡಾದ ಹಿನ್ನೆಲೆ ಒಬ್ಬ ಯುವಕನ ಜೊತೆ ಮಾಡಿ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದೇವೆ. ಅವರಿಗೆ ಯುವಕನೊಬ್ಬ ರಕ್ತದಾನ ಮಾಡಿದ್ದಾರೆ, ಅದನ್ನು ನಾವು ಸ್ವಾಗತಿಸುತ್ತೇವೆ. ಇಂತಹ ಕಾರ್ಯ ಸಮಾಜಕ್ಕೆ ಮಾದರಿ‘‘ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬರೋಬ್ಬರಿ 117 ಬಾರಿ ರಕ್ತದಾನ ಮಾಡಿ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ