ಹಾವೇರಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನಿಗೆ ಕೋಟ್ಯಂತರ ಭಕ್ತರಿದ್ದಾರೆ. ಈ ಪೈಕಿ ಓರ್ವ ವಿಶೇಷ ಭಕ್ತ ಹಾವೇರಿ ಸಮೀಪದ ದೇವಗಿರಿ ಗ್ರಾಮದಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಇವರ ಹೆಸರು ಮಹ್ಮದ್ ಶರೀಫ್ ತರ್ಲಗಟ್ಟ. ಇದೀಗ ರೇಣುಕಾ ಯಲ್ಲಮ್ಮನ ಪಡ್ಡಲಗಿ ತುಂಬಿಸಲು ದೇವಗಿರಿಯಿಂದ ಸವದತ್ತಿವರೆಗೆ ಇವರು ಬಂಡಿ ಯಾತ್ರೆ ಕೈಗೊಂಡಿದ್ದಾರೆ.
ಮಹ್ಮದ್ ಶರೀಫ್ ತಾನು ಸಾಕಿದ ರಾಮ, ಭೀಮ ಹೆಸರಿನ ಎರಡು ಕೋಣಗಳನ್ನು ಬಂಡಿಗೆ ಕಟ್ಟಿಕೊಂಡು 150 ಕಿಲೋ ಮೀಟರ್ ದೂರದ ಯಲ್ಲಮ್ಮನ ಗುಡ್ಡಕ್ಕೆ ಯಾತ್ರೆ ಹೊರಟಿದ್ದಾರೆ.
ಮಹ್ಮದ್ ಶರೀಫ್ ಅವರ ಅಜ್ಜ, ಮುತ್ತಾತರು ಯಲ್ಲಮ್ಮನ ಭಕ್ತರಂತೆ. ಸಾಕಷ್ಟು ಸಮಸ್ಯೆಯಲ್ಲಿದ್ದ ಮಹ್ಮದ್ ಶರೀಫ್ ಕುಟುಂಬ ಯಲ್ಲಮ್ಮನ ಆಶೀರ್ವಾದದಿಂದ ಬದುಕಿನಲ್ಲಿ ಒಂದು ಹಂತದವರೆಗೆ ಬೆಳೆದು ಬಂದರಂತೆ.
"ನಮ್ಮ ತಾತ, ಮುತ್ತಾತರು ರೇಣುಕಾ ಯಲ್ಲಮ್ಮನ ಭಕ್ತರು. ನಾವು ಇದೇ ಪ್ರಥಮ ಬಾರಿಗೆ ಕೋಣಗಳಿಂದ ಬಂಡಿ ಕಟ್ಟಿಕೊಂಡು ಸವದತ್ತಿಗೆ ಬಂಡಿ ಯಾತ್ರೆ ಕೈಗೊಂಡಿದ್ದೇವೆ" ಎಂದು ಮಹ್ಮದ್ ಶರೀಫ್ ತಿಳಿಸಿದರು.
ಕೋಣಗಳಿಗೆ ಮೂಗುದಾರ, ಮುಖ ಚೌಕಟ್ಟು, ನಾಗಚೌಕಟ್ಟು, ಜೋಲಾ ಬಲೂನ್ಗಳಿಂದ ಅಲಂಕರಿಸಲಾಗಿದೆ. ದಾರಿಯುದ್ದಕ್ಕೂ ಯಲ್ಲಮ್ಮ ತಾಯಿಗೆ ಜೈಕಾರ ಹಾಕುತ್ತಾ ಮಹ್ಮದ್ ಶರೀಫ್ ಸಾಗುತ್ತಿದ್ದಾರೆ. ಯಾತ್ರೆಗೆ ಮಗ ಸಾಹೀಲ್ ಕೂಡಾ ಸಾಥ್ ನೀಡಿದ್ದಾರೆ.
"ಪ್ರತಿನಿತ್ಯ ವಿಶೇಷ ಆಹಾರ ತಿನ್ನಿಸಿ, ಕೋಣಗಳನ್ನು ಬಂಡಿಯಾತ್ರೆಗೆ ಸಿದ್ದಪಡಿಸಲಾಗಿದೆ. ತಾಯಿಯ ದರ್ಶನ ಮಾಡಲು ಉತ್ಸುಕನಾಗಿದ್ದೇನೆ. ನಿತ್ಯ 50 ಕಿಲೋ ಮೀಟರ್ ಪಯಣಿಸಿ, ಮೂರನೇ ದಿನಕ್ಕೆ ಯಲ್ಲಮ್ಮನ ದರ್ಶನ ಪಡೆದು ಸ್ವಗ್ರಾಮ ದೇವಗಿರಿಗೆ ಮರಳುತ್ತೇನೆ" ಎಂದು ಶರೀಫ್ ಹೇಳಿದ್ದಾರೆ.
"ಆಕೆ ನಮ್ಮ ತಾಯಿ. ತಾಯಿಯ ದರ್ಶನ ಮಾಡಿ ಅವಳಿಗೆ ಹಣ್ಣುಕಾಯಿ ಮಾಡಿಸಿಕೊಂಡು ಪಡ್ಡಲಗಿ ತುಂಬಿಸಿಕೊಂಡು, ಮರಳಿ ಗ್ರಾಮಕ್ಕೆ ಬರುತ್ತೇವೆ" ಎಂದು ಮಹ್ಮದ್ ಶರೀಫ್ ಪುತ್ರ ಸಾಹೀಲ್ ತಿಳಿಸಿದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ: ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ