ಚಿಕ್ಕೋಡಿ: ಸಾಮಾನ್ಯವಾಗಿ ಎಲ್ಲ ಜಾತ್ರೆಗಳಲ್ಲಿ ರಥೋತ್ಸವ, ವಿವಿಧ ಉತ್ಸವ ಕಾರ್ಯಕ್ರಮ ನೋಡಿದ್ದೇವೆ, ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಮಠದಲ್ಲಿ ಈ ವರ್ಷ ವಿಭಿನ್ನ ರೀತಿ ಜಾತ್ರೆ ಆಚರಿಸಿದ್ದು, ಇದು ಇಂಡಿಯಾ ಸ್ಟಾರ್ ವರ್ಲ್ಡ್ ರೆಕಾರ್ಡ್ ಬುಕ್ನಲ್ಲಿ ದಾಖಲಾಗಿದೆ. ಅಜ್ಜನ ರೊಟ್ಟಿ ಬುತ್ತಿ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಮುಗಳಖೋಡ ಜಾತ್ರೆಯಲ್ಲಿ ಈ ಬಾರಿ ಭಕ್ತರು ಅಜ್ಜನ ಪುಣ್ಯಸ್ಮರಣೆಯೊಂದಿಗೆ ದೇಶ ಪ್ರೇಮವನ್ನು ಮೆರೆದಿದ್ದಾರೆ.
ಹೌದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಲಿಂಗೈಕ್ಯ ಶ್ರೀ ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಒಂದು ವಾರ ಕಾಲ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪುಣ್ಯ ಸ್ಮರಣೆಯಲ್ಲಿ ಗ್ರಾಮೀಣ ಭಾಗದ ರೈತರು ಮಠಕ್ಕೆ ಅನ್ನ ಸಮರ್ಪಣೆ ಮಾಡುವುದು ವಾಡಿಕೆ. ಪ್ರತಿ ವರ್ಷವೂ ರೈತ ಮಹಿಳೆಯರು ನೂರಾರು ರೊಟ್ಟಿ ಮಾಡಿಕೊಂಡು ಮಠಕ್ಕೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಾರೆ.
ಭಕ್ತಿಯ ಜೊತೆ ದೇಶಪ್ರೇಮ ಮೆರೆದ ಭಕ್ತರು: ಆದರೆ ಈ ವರ್ಷ ಭಕ್ತರು ಅಜ್ಜನ ಜಾತ್ರೆಯಲ್ಲಿ ಭಕ್ತಿಯ ಜೊತೆ ದೇಶಪ್ರೇಮ ಮೆರೆದಿದ್ದಾರೆ. ರೊಟ್ಟಿಯ ಬುಟ್ಟಿಗಳ ಮೇಲೆ ರಾಷ್ಟ್ರಧ್ವಜ ಪ್ರತಿಬಿಂಬಿಸುವ ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ಬುತ್ತಿಯ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಸುಕ್ಷೇತ್ರ ಮುಗಳಖೋಡ ಮಠದ ಜಾತ್ರೆಗೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಬಂದಿದ್ದ ಸರಿಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಅಜ್ಜನವರ ಪುಣ್ಯಸ್ಮರಣೆಯಲ್ಲಿ ಭಾಗಿಯಾದರು.
ರೊಟ್ಟಿ ಬುತ್ತಿ ಹೊತ್ತು ಮಹಿಳೆಯರಿಂದ ಪಾದಯಾತ್ರೆ: ಮುಗಳಖೋಡ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಭಕ್ತಿಯೊಂದಿಗೆ ರಾಷ್ಟ್ರ ಪ್ರೇಮವೂ ಕಂಡುಬಂತು. ಸುಮಾರು ಎರಡು ಕಿಲೋ ಮೀಟರ್ ರೊಟ್ಟಿ ಬುತ್ತಿ ಹೊತ್ತುಕೊಂಡು ಮಹಿಳೆಯರು ಪಾದಯಾತ್ರೆ ನಡೆಸಿದರು. ದಾರಿ ಉದ್ದಕ್ಕೂ ದೇಶಪ್ರೇಮ ಹಾಗೂ ಭಕ್ತಿ ಗೀತೆಗಳು ಮೆರವಣಿಗೆಗೆ ಮೆರುಗು ತಂದವು. ಅಜ್ಜನ ಜಾತ್ರೆಯಲ್ಲಿ ದೇಶದ ತಿರಂಗ ಪ್ರದರ್ಶಿಸುವುದೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು.
ಮುಗಳಖೋಡ ಮಠವು ಭಾವೈಕ್ಯತೆಯ ಸ್ಥಳ: ಮುಗಳಖೋಡ ಮಠವು ಭಾವೈಕ್ಯತೆಯ ಸ್ಥಳವಾಗಿ ಗುರುತಿಸಿಕೊಂಡಿದೆ. ಇಲ್ಲಿ ಯಾವುದೇ ಜಾತಿ ಭೇದ, ಪಂಥ ಇಲ್ಲದೇ ಎಲ್ಲ ಭಕ್ತರು ಸಮನಾಗಿ ದೇವರಿಗೆ ಬರುವುದು ವಿಶೇಷವಾಗಿದೆ. ಪ್ರತಿ ವರ್ಷವೂ ತಮ್ಮಷ್ಟಕ್ಕೆ ತಾವೇ ರೊಟ್ಟಿಯನ್ನು ಅರ್ಪಣೆ ಮಾಡುತ್ತಿದ್ದರು. ಆದ್ರೆ ಈ ವರ್ಷ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾಕ್ಟರ್ ಮುರುಘರಾಜೇಂದ್ರ ಸ್ವಾಮೀಜಿ ಅವರು, 'ಅಜ್ಜನ ರೊಟ್ಟಿ ಬುತ್ತಿ ಜಾತ್ರೆ" ಎಂಬ ಶೀರ್ಷಿಕೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಗ್ರಾಮದ ಮಹಿಳೆಯರು ಒಟ್ಟಾಗಿ ಮಠಕ್ಕೆ ರೊಟ್ಟಿ ಬುತ್ತಿಯನ್ನು ಅರ್ಪಣೆ ಮಾಡಿದ್ದಾರೆ.
ತಿರಂಗ ಧ್ವಜವನ್ನು ಬಿಂಬಿಸುವ ಹಾಗೂ ರಾಷ್ಟ್ರ ಪ್ರೇಮ ಮೆರೆಯುವ ಅಜ್ಜನ ರೊಟ್ಟಿ ಬುತ್ತಿ ಜಾತ್ರೆ ಕಾರ್ಯಕ್ರಮ ಇಂಡಿಯಾ ಸ್ಟಾರ್ ವರ್ಲ್ಡ್ ಬುಕ್ ನಲ್ಲಿ ಸ್ಥಾನಮಾನ ಪಡೆದುಕೊಂಡಿದೆ. ಭಕ್ತರು ತೋರಿದ ಭಕ್ತಿಯಿಂದ ಮುಗಳಖೋಡ ಮಠದ ಕೀರ್ತಿ ಮತ್ತಷ್ಟು ವಿಸ್ತಾರಿಸಿದೆ ಎಂದು ಮಠದ ಪೀಠಾಧಿಪತಿ ಡಾಕ್ಟರ್ ಮುರುಘರಾಜೇಂದ್ರ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.
ಭರತ ಭೂಮಿಯಲ್ಲಿ ಮಠಗಳ ಪಾತ್ರ ಅನನ್ಯ. ಅನ್ನದಾಸೋಹ, ಅಕ್ಷರ ದಾಸೋಹ, ದೇಶ ಪ್ರೇಮ ಜಾಗೃತಿ ಮೂಡಿಸುತ್ತಿರುವ ದೇಶದ ವಿವಿಧ ಮಠಗಳಂತೆ ಮುಗಳಖೋಡದ ಅಜ್ಜನ ಮಠದ ಕಾರ್ಯ ವೈಖರಿಯೂ ಒಂದು ವಿಶೇಷವಾಗಿದೆ.
ಇದನ್ನೂ ಓದಿ: ಸುತ್ತೂರು ಜಾತ್ರಾ ಮಹೋತ್ಸವ: ನವದಾಂಪತ್ಯಕ್ಕೆ ಕಾಲಿಟ್ಟ 120 ಜೋಡಿ