ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಹಾಗೂ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಶಾಸಕರು ಜಂಟಿಯಾಗಿ ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಹಾಸಿಗೆ, ದಿಂಬುಗಳ ಸಮೇತವಾಗಿ ಪ್ರತಿಭಟಿಸಿ ಇಡೀ ರಾತ್ರಿ ಸೋಫಾ ಮತ್ತು ನೆಲದ ಮೇಲೆ ನಿದ್ರಿಸಿದರು. ಇಂದು ಬೆಳಗ್ಗೆ ಎದ್ದು ಕಾಫಿ, ಟೀ ಸೇವಿಸಿ, ವಿಧಾನಸೌಧದ ಮುಂಭಾಗ ವಾಕಿಂಗ್, ಯೋಗ, ವ್ಯಾಯಾಮ ಮಾಡುವ ದೃಶ್ಯ ಕಂಡುಬಂತು.
ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಬುಧವಾರ ಸದನದಲ್ಲಿ ಬಿಜೆಪಿ ಸದಸ್ಯರು ನಿಲುವಳಿ ಮಂಡಿಸಿದರು. ಸ್ಪೀಕರ್ ನಿಲುವಳಿಯನ್ನು ತಿರಸ್ಕರಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದರು. ಆಗ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಹೀಗಾಗಿ ಸರ್ಕಾರದ ವಿರುದ್ಧ ಸದನದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಧರಣಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪಾಲ್ಗೊಂಡರು.
ಇದಕ್ಕೂ ಮುನ್ನ ಸ್ಪೀಕರ್ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೊಪ್ಪದ ಶಾಸಕರು ಧರಣಿ ಮುಂದುವರಿಸಿದರು.
'ಹಗರಣದ ಹಣದಲ್ಲಿ ಊಟ ಮಾಡುವುದಿಲ್ಲ': ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರತಿಭಟನಾನಿರತ ಸದಸ್ಯರಿಗೆ ಭೋಜನದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆಗ ಆರ್.ಅಶೋಕ್, ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಹಣದಲ್ಲಿ ನಾವು ಊಟ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಇಡೀ ರಾತ್ರಿ ಎಲ್ಲ ಶಾಸಕರು ಸದನದಲ್ಲೇ ಕಳೆದರು.
ನಿದ್ರೆಗೆ ಜಾರುವ ಮುನ್ನ ಒಟ್ಟಿಗೆ ಕುಳಿತು ಅಂತ್ಯಾಕ್ಷರಿ ಹಾಡಿದರು. ಹನುಮಾನ್ ಚಾಲೀಸಾ ಮತ್ತು ಭಜನೆ ಪಠಿಸುವ ಮೂಲಕವೂ ಗಮನ ಸೆಳೆದರು. ಸಭಾಪತಿ ಹೊರಟ್ಟಿ ಬಂದಾಗಲೂ ಶಾಸಕರು ಹಾಡುಗಳನ್ನು ಹಾಡಿದರು. ಹಾಡುಗಳನ್ನು ಕೇಳುತ್ತಾ ಹೊರಟ್ಟಿ, "ಇನ್ಮುಂದೆ ಶಾಸಕರ ದಿನಾಚರಣೆ ಮಾಡೋಣ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಾದ ಬಳಿಕ ಶಾಸಕರು ದಿಂಬು, ಹಾಸಿಗೆಗಳನ್ನು ಹೊದ್ದು ನಿದ್ರೆಗೆ ಜಾರಿದರು.
ಸರ್ಕಾರದ ಉಪಚಾರ ತಿರಸ್ಕಾರ: ರಾತ್ರಿ ಧರಣಿ ಆರಂಭಿಸಿದ ಬಳಿಕ ಮಾತನಾಡಿದ ಆರ್.ಅಶೋಕ್, "ಮುಡಾ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೊಡದೇ ಈಗ ನಮ್ಮ ಅಹೋರಾತ್ರಿ ಧರಣಿ ವೇಳೆ ಊಟೋಪಚಾರದ ವ್ಯವಸ್ಥೆ ಮಾಡಲು ಸ್ಪೀಕರ್ ಮುಂದಾಗಿದ್ದರು. ನಾವು ಅವರ ಉಪಚಾರವನ್ನು ತಿರಸ್ಕರಿಸಿದ್ದೇವೆ" ಎಂದು ತಿಳಿಸಿದರು.
''ಸ್ಪೀಕರ್ ನಮ್ಮನ್ನು ಕರೆದಿದ್ದರು. ಧರಣಿ ಸಮಯದಲ್ಲಿ ಊಟ, ತಿಂಡಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈಗ ಇವರ ಊಟ, ತಿಂಡಿ ಕಟ್ಟುಕೊಂಡು ನಮಗೆ ಏನಾಗಬೇಕು?, ಲೂಟಿ ಹೊಡೆದ ದಲಿತರ ಹಣದಲ್ಲಿ ನಾವು ಊಟ ಮಾಡಬೇಕಿಲ್ಲ. ಹಾಗಾಗಿ ನಮ್ಮ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ. ಅವರ ಊಟ, ತಿಂಡಿ ವ್ಯವಸ್ಥೆ ತಿರಸ್ಕಾರ ಮಾಡಿದ್ದೇವೆ. ಇದು ದಲಿತ ವಿರೋಧಿ ಸರ್ಕಾರ'' ಎಂದು ಟೀಕಿಸಿದರು.
#WATCH | Bengaluru: Karnataka BJP MLA Basanagouda R Patil says, " this muda scam is of rs 4000 crore. there is a lot of corruption in land acquisition and allotment of plots... we want that all the scams that happened during siddaramaiah, bs yediyurappa, basavaraj bommai… https://t.co/DDwB7AqMUv pic.twitter.com/uJBSbwwgc4
— ANI (@ANI) July 25, 2024
''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ 14 ತಿಂಗಳಲ್ಲಿ ಎರಡು ದೊಡ್ಡ ಹಗರಣ ನಡೆದಿದೆ. ಮುಡಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚದರಡಿ ಭೂಮಿ ಕಬ್ಜ ಮಾಡಿದ್ದಾರೆ. ಇದು ಸ್ವಜನ ಪಕ್ಷಪಾತ. ವಾಲ್ಮೀಕಿ ಹಗರಣದ ಬಗ್ಗೆ ಸಿಬಿಐ, ಇಡಿ, ಎಸ್ಐಟಿ ತನಿಖೆ ನಡೆಯುತ್ತಿದೆ. ದಲಿತರ ಹಣ ಲೂಟಿಯಾಗಿದೆ. ಎಸ್ಸಿಪಿ-ಟಿಎಸ್ಪಿ ಹಣದಲ್ಲಿ 25 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಇದೇ ಈ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಮುಖ್ಯಮಂತ್ರಿಗಳು ನಮಗೆ ಭಯ ಇಲ್ಲ ಅಂತಿದ್ದಾರೆ. ಭಯ ಇಲ್ಲದ ಮೇಲೆ ಚರ್ಚೆಗೆ ಹೆದರೋದೇಕೆ?, ಸಿಎಂ ಹಾಗೂ ಇಡೀ ತಂಡ ಹೆದರಿ ಓಡುತ್ತಿದ್ದಾರೆ. ಸದನದಲ್ಲಿ ಉತ್ತರ ಕೊಡಲು ಹೆದರುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
#WATCH | Bengaluru: Basavaraj Horatti, Chairman of the Karnataka Legislative Council says, " they (bjp) have sent an adjournment motion regarding muda. i tried to explain to them that this is not a regular matter. regular matter means if the government has failed in its duty,… pic.twitter.com/Q40SAaOBjO
— ANI (@ANI) July 25, 2024
''ಸ್ಪೀಕರ್ ನಡೆ ಕೂಡ ಪ್ರಶ್ನೆ ಮಾಡುವಂತಿದೆ. ಬೋವಿ ನಿಗಮದ ಹಗರಣ ಬಗ್ಗೆ ಸ್ಪೀಕರ್ ಕರೆದು ಕರೆದು ಚರ್ಚೆ ಮಾಡಿಸಿದ್ದರು. ಅದು ಮೂರ್ನಾಲ್ಕು ವರ್ಷಗಳ ಹಿಂದಿನದ್ದು. ಮುಡಾ ವಿಷಯ ಚರ್ಚೆ ಬಂದ ತಕ್ಷಣ ಚರ್ಚೆಗೆ ಅವಕಾಶ ಕೊಡಲಿಲ್ಲ. ಚರ್ಚೆಗೆ ಅವಕಾಶ ಕೊಡದೆ ಪಲಾಯಾನ ಮಾಡುತ್ತಿದ್ದಾರೆ. ನಾವು ಹೋರಾಟವನ್ನು ಕಾಟಾಚಾರಕ್ಕೆ ಮಾಡುತ್ತಿಲ್ಲ. ಹಗಲು ರಾತ್ರಿ ಹೋರಾಟ ಮಾಡಿ, ಜನರಿಗೆ ನ್ಯಾಯ ಕೊಡಿಸುತ್ತೇವೆ'' ಎಂದು ಹೇಳಿದರು.
#WATCH | Bengaluru, Karnataka: Outside visuals of the Karnataka Vidhan Soudha after BJP MLAs slept inside the assembly in a protest demanding discussion on the alleged MUDA scam. pic.twitter.com/xgLXWyL6US
— ANI (@ANI) July 25, 2024
ಶಾಸಕರನ್ನು ತಡೆದ ಡಿಸಿಪಿ: ಸಂಜೆ ವಿಧಾನಸೌಧದ ಮುಂಭಾಗದ ಲಾಂಜ್ಗೆ ಬಂದ ಬಿಜೆಪಿ ಶಾಸಕ ಧೀರಜ್ ಮುನಿರಾಜು ವಾಪಸ್ ಸದನದ ಪ್ರತಿಪಕ್ಷದ ಮೊಗಸಾಲೆಗೆ ತೆರಳಲು ಮುಂದಾದಾಗ ಲಾಂಜ್ ದ್ವಾರದಲ್ಲಿ ಅವರನ್ನು ಡಿಸಿಪಿ ತಡೆದರು. ಶಾಸಕರು ಎಂದು ತಿಳಿಯದೆ ಡಿಸಿಪಿ, ''ವಿಧಾನಸೌಧದ ಪೂರ್ವ ಬಾಗಿಲು ಮುಚ್ಚಿದ್ದ ಹಿನ್ನೆಲೆಯಲ್ಲಿ ಒಳಗೆ ಹೋಗಲು ಬಾಗಿಲು ಬಡಿಯುತ್ತಿದ್ದಾಗ ಸದನದ ಮೊಗಸಾಲೆಯ ಒಳಗೆ ಬಿಡುವುದಿಲ್ಲ. ಆ ಕಡೆ ಹೋಗಿ'' ಎಂದು ಸೂಚಿಸಿದ್ದಾರೆ.
ಬಳಿಕ ಶಾಸಕರು ಅಂತಾ ಗೊತ್ತಾದ ಮೇಲೆ ಕ್ಷಮೆ ಕೇಳಿದ ಡಿಸಿಪಿ, ಶಾಸಕರ ಪ್ರವೇಶಕ್ಕೆ ಅವಕಾಶ ನೀಡಿದರು. ಇದೇ ವೇಳೆ, ಡಿಸಿಪಿಗೆ ಎಚ್ಚರಿಕೆ ನೀಡಿದ ಶಾಸಕ ಧೀರಜ್ ಮುನಿರಾಜು, ಒಳಪ್ರವೇಶಿಸಿ ಪ್ರತಿಪಕ್ಷದ ನಾಯಕ ಅಶೋಕ್ ಅವರಿಗೆ ಮಾಹಿತಿ ನೀಡಿದರು. ಆಗ ಹೊರಗೆ ಬಂದ ಅಶೋಕ್, ''ಈ ಬಾಗಿಲು ತೆರೆದಿದ್ದೀರಿ, ಬಾಗಿಲ ಬಳಿ ಕಾಯಿರಿ. ಶಾಸಕರು ಯಾವ ಕಡೆ ಬಂದರೂ ಬಿಡಬೇಕು'' ಎಂದು ತಾಕೀತು ಮಾಡಿದರು.
ಇದನ್ನೂ ಓದಿ: ಮೂಡಾ ಹಗರಣ: ಬಿಜೆಪಿ - ಜೆಡಿಎಸ್ ಸದಸ್ಯರಿಂದ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭ