ಮಂಗಳೂರು: ಈ ಋತುವಿನ 8ನೇ ವಿಲಾಸಿ ಪ್ರವಾಸಿ ಕ್ರೂಸ್ ಹಡಗು ಭಾನುವಾರ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಆಗಮಿಸಿತು.
"MS INSIGNIA" ಎಂಬ ಹೆಸರಿನ ನಾರ್ವೇಜಿಯನ್ ಕ್ರೂಸ್ನಲ್ಲಿ 509 ಪ್ರಯಾಣಿಕರು ಮತ್ತು 407 ಸಿಬ್ಬಂದಿಗಳನ್ನು ಹೊತ್ತು ಬಂದರಿಗೆ ಆಗಮಿಸಿತ್ತು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಮಂಗಳೂರಿಗೆ ಬಂದ ಪ್ರವಾಸಿಗರಿಗೆ ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಮತ್ತು ಟ್ಯಾಕ್ಸಿ ವ್ಯವಸ್ಥೆ ಮಾಡಲಾಗಿತ್ತು.
ಆಯುಷ್ ಸಚಿವಾಲಯವು ಸ್ಥಾಪಿಸಿದ ಕೇಂದ್ರದಲ್ಲಿ ಪ್ರಯಾಣಿಕರು ಧ್ಯಾನದ ಅನುಭವ ಪಡೆದುಕೊಂಡರು. ತುಳುನಾಡಿನ ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರವಾಸಿಗರನ್ನು ರಂಜಿಸಿದವು. ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.
ಪ್ರವಾಸಿಗರು ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್ಸ್, ಅಚಲ್ ಗೋಡಂಬಿ ಕಾರ್ಖಾನೆ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು. ಬಳಿಕ ಈ ಹಡಗು ಸಂಜೆ 7ಗಂಟೆಗೆ ಮೊರ್ಮುಗೋವಾದ ಕಡೆಗೆ ಪ್ರಯಾಣ ಬೆಳೆಸಿತು.
ಇದನ್ನೂ ಓದಿ: 7 ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಹೈಸ್ಪೀಡ್ ಪ್ರವಾಸಿ ಪರೇಲಿ ಹಡಗು - High speed ship