ಮೈಸೂರು: "ದೇಶದಲ್ಲಿರುವ ದುರ್ಬಲ ವರ್ಗಗಳ ಜನರ ನೆರವಿಗಾಗಿ ಭಾರತ್ ಬ್ರ್ಯಾಂಡ್ ಎಂಬ ಹೆಸರಿನಲ್ಲಿ ಅಕ್ಕಿ ವಿತರಣೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ" ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನ ಹೆಬ್ಬಾಳದ ಕಾವೇರಿ ಸರ್ಕಲ್ ಬಳಿ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಯೋಜನೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಭಾರತ್ ಬ್ರ್ಯಾಂಡ್ ಅಡಿ 29 ರೂಪಾಯಿ ದರದಲ್ಲಿ ಅಕ್ಕಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ" ಎಂದು ಹೇಳಿದ ಸಂಸದರು, ತಲಾ 10 ಕೆಜಿಯ ಅಕ್ಕಿ ಇರುವ ಚೀಲವನ್ನು ಸಾರ್ವಜನಿಕರಿಗೆ ವಿತರಿಸಿದರು.
ದುರುಪಯೋಗ ತಡೆಗೆ ಮೊಬೈಲ್ ಸಂಖ್ಯೆ ಸಂಗ್ರಹ: "ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಅಕ್ಕಿ ವಿತರಣೆ ನಡೆಯುತ್ತಿದ್ದು, ಯೋಜನೆ ದುರುಪಯೋಗ ಆಗದಂತೆ ಕ್ರಮ ವಹಿಸಲಾಗಿದೆ. ಮೊಬೈಲ್ ಸಂಖ್ಯೆಯನ್ನು ಪಡೆದು, ನಂತರ ಟೋಕನ್ ನೀಡಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ರೀತಿ ಮಾಡುವುದರಿಂದ ಯಾವುದೇ ದುರುಪಯೋಗ ಆಗುವುದಿಲ್ಲ. ಜೊತೆಗೆ ಇದರ ಸಂಪೂರ್ಣ ಮಾಹಿತಿ ಸಹ ನಮಗೆ ದೊರೆಯುತ್ತದೆ. ನೇರವಾಗಿ ಇದರ ಮಾಹಿತಿ ಕೇಂದ್ರ ಕಚೇರಿಗೆ ತಲುಪುವುದರಿಂದ ಇಲ್ಲಿ ದುರ್ಬಳಕೆ ಸಾಧ್ಯವಿಲ್ಲ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
"ಕೆಜಿ ಅಕ್ಕಿಯನ್ನು 29 ರೂಪಾಯಿಗೆ ನೀಡಲಾಗುತ್ತಿದ್ದು, 10 ಕೆಜಿ ತೂಕದ 300 ಅಕ್ಕಿ ಬ್ಯಾಗ್ಗಳು ಬಂದಿವೆ. ಖಾಲಿಯಾದ ನಂತರ ಮತ್ತೆ ತರಿಸಲಾಗುತ್ತದೆ. ದೇಶಾದ್ಯಂತ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸಾರ್ವಜನಿಕರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಲ್ಲೆಡೆ ಈ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆ ಮಾಡಲಾಗುತ್ತದೆ" ಎಂದು ಸಂಸದರು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ಸಿನವರು ಪ್ರತಿಭಟನೆಗೆ ಮುಂದಾಗಿದ್ದಾರೆ: ಸಂಸದ ಪ್ರತಾಪ್ ಸಿಂಹ
ಆನ್ಲೈನ್ನಲ್ಲೂ ಭಾರತ್ ರೈಸ್ ಲಭ್ಯ: ಕೇವಲ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಟ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ. ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಸಿ ಅಕ್ಕಿಯನ್ನ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಕಡಿಮೆ ದರದಲ್ಲಿ ಅಕ್ಕಿ ಸಿಗ್ತಿರೋದು ಉಪಯುಕ್ತ ಎನ್ನುತ್ತಿದ್ದಾರೆ ಜನ. ಮಹಾನಗರ, ಸಣ್ಣ ನಗರಗಳಲ್ಲಿ ವಾಹನಗಳ ಮೂಲಕ ಈ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ.