ಮಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ಅಸಮಾಧಾನ ಇಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಸಂಘಟನೆ ಕಾರ್ಯಕ್ಕೆ ಇರುವವರು. ಹಾಗಾಗಿ ಅಸಮಾಧಾನ ಇಲ್ಲ ಎಂದರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಂದವನು. ಸಂಘದ ಕಾರ್ಯಕ್ಕೋಸ್ಕರ ಬಂದಿದ್ದೆ. ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಕೊಟ್ಟರು. ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿದರು. ಯಾವ ಪಾರ್ಟಿಯಲ್ಲೂ ಈ ರೀತಿ ಇರುವುದಿಲ್ಲ. ಅವಕಾಶ ಸಿಕ್ಕಾಗ ನ್ಯಾಯ, ಸಿಗದೇ ಇದ್ದಾಗ ಅನ್ಯಾಯ ಎಂದು ಹೇಳಲ್ಲ. ಟಿಕೆಟ್ ಸಿಗದಿದ್ದರೆ ಮುಂದೆ ಬೇರೆ ಅವಕಾಶ ಸಿಗಬಹುದು. ಪಕ್ಷ ನನಗೆ ಮೂರು ಬಾರಿ ಅವಕಾಶ ನೀಡಿದೆ ಎಂದರು.
ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಪಾರ್ಟಿಯ ರಾಷ್ಟ್ರೀಯ ನಾಯಕರು ಯಾರನ್ನೂ ಆಯ್ಕೆ ಮಾಡಿದರೂ ಸ್ವಾಗತಿಸುತ್ತೇನೆ. ಪಕ್ಷ ನಿಂತ ನೀರಾಗಬಾರದು. ಹೊಸಬರು ಬರ್ತಾ ಇರಬೇಕು. ಚಲಾವಣೆಯಲ್ಲಿ ಇರಬೇಕು ಎಂದು ಹೇಳಿದರು.
ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ರಾಷ್ಟ್ರೀಯ ನಾಯಕರ ಯೋಚನೆಗೆ ಬದ್ದರಾಗಿ ಕೆಲಸ ಮಾಡುತ್ತೇವೆ. ಯಾವುದೇ ಸಾಮಾಜಿಕ ಜಾಲತಾಣಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ದರಾಗುತ್ತೇವೆ. ನಾವು ಕಾರ್ಯವನ್ನು, ಕಾರ್ಯಕರ್ತರನ್ನು ನಂಬಿದವರು ಎಂದು ತಿಳಿಸಿದರು.
ಇದನ್ನೂ ಓದಿ : ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ಗೆ ಬಿಜೆಪಿ ಟಿಕೆಟ್: ವಿಜಯೇಂದ್ರ ಸುಳಿವು