ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದೇನು? - MUDA Scam - MUDA SCAM
ಸಿಎಂ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕುರಿತು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.


Published : Aug 18, 2024, 6:38 PM IST
|Updated : Aug 18, 2024, 7:17 PM IST
ಚಿಕ್ಕಮಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕುರಿತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಅನುಮತಿ ಪತ್ರದಲ್ಲಿ ಏನಿದೆ?, ಯಾವ ಆದೇಶ, ಸೂಚನೆ ನೀಡಿದ್ದಾರೆ ಅನ್ನೋದನ್ನು ನೋಡಬೇಕು ಎಂದು ಹೇಳಿದರು.
ಕೊಪ್ಪ ತಾಲೂಕಿನಲ್ಲಿಂದು ಪ್ರತಿಕ್ರಿಯಿಸಿದ ಅವರು, ಹಿಂದೆ ಯಡಿಯೂರಪ್ಪನವರ ಪ್ರಕರಣದಲ್ಲೂ ರಾಜ್ಯಪಾಲರು ಇದೇ ರೀತಿ ಅನುಮತಿ ನೀಡಿದ್ದು ನೆನಪಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಆಗಿರುತ್ತದೆ. ನಾವು ಮುಂದೇನು ಮಾಡ್ಬೇಕೆಂದು ಯೋಚಿಸಬೇಕು. ರಾಜಕೀಯ ಪಕ್ಷಗಳು ಹೇಳಿಕೆ ಕೊಡುವುದು ಸಾಮಾನ್ಯ. ಯಡಿಯೂರಪ್ಪನವರ ಮೇಲೆ ಅನುಮತಿ ನೀಡಿದಾಗ ನಮ್ಮ ಪಕ್ಷ ರಾಜ್ಯಪಾಲರ ಕಚೇರಿ ದುರ್ಬಳಕೆ ಅಂದಿತ್ತು. ಇಂದು ಸಿದ್ದರಾಮಯ್ಯನವರ ಮೇಲೆ ಅನುಮತಿ ನೀಡಿದಾಗ ಕಾಂಗ್ರೆಸ್ ರಾಜ್ಯಪಾಲರ ಕಚೇರಿ ದುರ್ಬಳಕೆ ಅಂತಿದೆ. ರಾಜ್ಯಪಾಲರ ಆದೇಶ ನೋಡಿ ಪ್ರಕರಣದ ಹಿನ್ನೆಲೆ-ಮುನ್ನೆಲೆಯ ಕುರಿತು ಮಾತನಾಡ್ತೀನಿ ಎಂದು ಹೇಳಿದರು.
ಸಿ.ಟಿ.ರವಿ ಪ್ರತಿಕ್ರಿಯೆ: ಸಿದ್ದರಾಮಯ್ಯನವರೇ, ನಿಮಗೆ ಯಡಿಯೂರಪ್ಪನವರ ದಾರಿಯಲ್ಲಿ ಹೋಗಲು ಅವಕಾಶವಿದೆ. ರಾಮಕೃಷ್ಣ ಹೆಗಡೆ ದಾರಿಯಲ್ಲಿ ಹೋಗುವ ಅವಕಾಶವನ್ನು ಕಳೆದುಕೊಂಡ್ರಿ. ಹೆಗಡೆ ಮೇಲೆ ಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು ಎಂದು ಚಿಕ್ಕಮಗಳೂರಿನಲ್ಲಿಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಿಮ್ಮ ಮೇಲೆ ಆರೋಪ ಬಂದಾಗ ಸೈಟ್ ಹಿಂದಿರುಗಿಸಿ ತನಿಖೆಯಾಗುವರೆಗೂ ಬೇಡ ಅನ್ನಬೇಕಿತ್ತು. ಹೀಗೆ ಮಾಡಿದ್ದರೆ ತುಂಬಾ ದೊಡ್ಡ ವ್ಯಕ್ತಿ ಆಗ್ತಿದ್ರಿ. ರಾಜ್ಯದ ಜನ ನಿಮ್ಮನ್ನು ನೈತಿಕತೆಯ ಉತ್ತುಂಗದ ಸ್ಥಾನದಲ್ಲಿ ಇಡ್ತಿದ್ರು. ಈಗ ರಾಜ್ಯಪಾಲರು ತನಿಖೆಗೆ ನೀಡಿರೋದೇ ಅಪರಾಧ ಅಂತ ಬಿಂಬಿಸುವ ಕೆಲಸ ನಡೆಸುತ್ತಿದ್ದೀರಿ ಎಂದರು.
ಇದನ್ನೂ ಓದಿ: ನೈತಿಕತೆಯ ಸಿದ್ಧಾಂತ ಹೇಳುವ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ವಿ.ಸುನೀಲ್ ಕುಮಾರ್ - MUDA Scam