ಬೆಳಗಾವಿ : ಬೆಳಗಾವಿ ತಹಶೀಲ್ದಾರ್ ಕಚೇರಿ ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ, ಪೊಲೀಸರು ಒತ್ತಡದಲ್ಲಿದ್ದಾರೆ. ನಿರ್ಭಯವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿನ ಸದಾಶಿವನಗರದಲ್ಲಿನ ಮೃತ ರುದ್ರೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಧೈರ್ಯ ತುಂಬಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಗದೀಶ್ ಶೆಟ್ಟರ್, ಹಣಕ್ಕಾಗಿ ಆತನ ಮೇಲೆ ಮಾನಸಿಕ ಒತ್ತಡ ತಂದಿದ್ದೇ ಆತ್ಮಹತ್ಯೆಗೆ ಮೂಲ ಕಾರಣ ಎಂಬುದು ಸ್ಪಷ್ಟವಾಗಿದೆ. ರುದ್ರೇಶ್ ತಾಯಿ ಹೇಳುವಂತೆ ರಾತ್ರಿ ಊಟ ಆದ ಮೇಲೆ ಒಂದು ಕಾಲ್ ಬರುತ್ತದೆ. ಕಾಲ್ ಬಂದ ಬಳಿಕ ರುದ್ರೇಶ್ ಗಲಿಬಿಲಿ ಆಗಿರುತ್ತಾನೆ. ಇದಾದ ಬಳಿಕ ಬೆಳಗ್ಗೆ ಎಲ್ಲರೂ ನಿದ್ದೆಯಿಂದ ಏಳುವ ಮೊದಲೇ ತಹಶೀಲ್ದಾರ್ ಕಚೇರಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೆಲ್ಲಾ ನೋಡಿದ ಮೇಲೆ ಮಾನಸಿಕ ವೇದನೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಮಾನಸಿಕ ಒತ್ತಡ ಮತ್ತು ಅಧಿಕಾರ ಶಾಹಿ ದೌರ್ಜನ್ಯವೇ ರುದ್ರೇಶ್ ಆತ್ಮಹತ್ಯೆಗೆ ಕಾರಣ. ರಾಜ್ಯದಲ್ಲಿ ಇವರ ಆಡಳಿತ ವ್ಯವಸ್ಥೆಗೆ ರುದ್ರೇಶ್ ಬಲಿಪಶು ಆಗಿದ್ದಾನೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ದೂರಿದರು.
ಸಚಿವರ ಪಿಎ, ತಹಶೀಲ್ದಾರ್ ಮತ್ತು ಮತ್ತೋರ್ವ ವ್ಯಕ್ತಿ ಸೇರಿ ಮೂವರು ಆರೋಪಿಗಳು. ಇವರ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಮೂವರು ತಪ್ಪು ಮಾಡಿಲ್ಲ ಎಂದರೆ ಇಲ್ಲಿಯೇ ಇರಬೇಕಿತ್ತಲ್ಲವೇ?. ಅಧಿಕಾರಿಗಳಿಗೆ ಇಷ್ಟು ಹಣ ಕೊಡಬೇಕು ಎಂದು ಒತ್ತಡ ಹಾಕುವುದರ ಹಿಂದೆ ಸಚಿವರ ಕೃಪಾಶೀರ್ವಾದವಿದೆ. ಅಲ್ಲದೇ, ಹಿಂದಿನ ದಿನ ಸಚಿವರ ಮನೆಗೆ ರುದ್ರೇಶ್ ಹೋದಾಗ ಒಳಗೆ ಬಿಟ್ಟಿಲ್ಲ, ಸರಿಯಾಗಿ ಮಾತಾಡಿಸಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗುತ್ತಿದೆ ಎಂದು ಶೆಟ್ಟರ್ ಕಿಡಿಕಾರಿದರು.
ಪ್ರಕರಣ ಸಿಬಿಐಗೆ ವಹಿಸಿ : ಈಗಾಗಲೇ ಆರೋಪಿಗಳು ಬೇಲ್ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಿ ಅಲ್ಲಿ ಬೇಲ್ ಪಡೆದುಕೊಂಡು ಹೊರಗೆ ಬರುವ ಉದ್ದೇಶದಿಂದ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಮಂತ್ರಿ ಮತ್ತು ರಾಜ್ಯ ಸರ್ಕಾರದ ಪ್ರಭಾವದಿಂದ ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿರುವುದು ಸರಿಯಲ್ಲ. ಪಾರದರ್ಶಕವಾಗಿ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದೇವೆ. ಸಿಬಿಐ ಮೇಲೆ ಎಲ್ಲರಿಗೂ ವಿಶ್ವಾಸಾರ್ಹತೆ ಇದೆ. ಆದರೆ, ಸಿಬಿಐಗೆ ಪ್ರಕರಣ ವಹಿಸಲು ರಾಜ್ಯ ಸರ್ಕಾರಕ್ಕೆ ಹೆದರಿಕೆ ಇದೆ. ಪ್ರಕರಣ ಸಿಬಿಐಗೆ ವಹಿಸಿದ್ದರೆ ಇಷ್ಟೊತ್ತಿಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಹಾಕುತ್ತಿದ್ದರು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಈಗಾಗಲೇ ಬಿಜೆಪಿ ಹೋರಾಟ ಆರಂಭಿಸಿದೆ. ಈಗಲೂ ಆರೋಪಿಗಳನ್ನು ಬಂಧಿಸದಿದ್ದರೆ, ಬಿಜೆಪಿ ಉಗ್ರ ಪ್ರತಿಭಟನೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾಜಿ ಶಾಸಕ ಸಂಜಯ್ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷಗೌಡ ಪಾಟೀಲ, ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಪಂಚನಗೌಡ ದ್ಯಾಮನಗೌಡರ ಇದ್ದರು.
ಇದನ್ನೂ ಓದಿ : ಎಸ್‌ಡಿಎ ಆತ್ಮಹತ್ಯೆ ಪ್ರಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಪ್ರತಿಕ್ರಿಯೆ