ಧಾರವಾಡ : ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಶೋಕ್ ಅವರೇ ಕೋರ್ಟ್ನಿಂದ ಎಲ್ಲವೂ ಕ್ಲಿಯರ್ ಆಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ತಮ್ಮ ಕೇಸ್ನ್ನು ಮತ್ತೊಬ್ಬರ ಕೇಸ್ ಜೊತೆಗೆ ಟೈಅಪ್ ಮಾಡಬಾರದು ಎಂದು ಸಂಸದ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಶೋಕ್ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕೋರ್ಟ್ನಲ್ಲಿಯೇ ತಪ್ಪಿಲ್ಲ ಎಂಬ ತೀರ್ಮಾನ ಆಗಿದೆ. ಮುಡಾ ಹಗರಣದ ತನಿಖೆಯಾಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ, ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದ್ರು. ಎಲ್ಲೋ ಒಂದು ಕಡೆ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಿಯಮ ಮೀರಿ 14 ಸೈಟ್ ತಗೊಂಡಿದ್ದಾರೆ : ತಮ್ಮ ಧರ್ಮ ಪತ್ನಿ ಹೆಸರು ಬೀದಿಗೆ ತರುವ ಕೆಲಸvನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಧರ್ಮಪತ್ನಿ ಹೆಸರು ಹೊರಗೆ ತಂದವರೇ ನೀವು. ಅವರಿಗೆ ಮಿಸ್ಟೇಕ್ ಮಾಡಲು ಹಚ್ಚಿದವರೇ ನೀವು. ಕಾನೂನಿನಲ್ಲಿರೋ 50:50 ನಿಯಮ ಮೀರಿ 14 ಸೈಟ್ ತಗೊಂಡಿದ್ದಾರೆ. ರಾಜಕೀಯವಾಗಿ ಮಾತ್ರ ಮಾತನಾಡುತ್ತಾ ಇದ್ದಾರೆ. ಆ ಸೈಟ್ಗಳ ಬಗ್ಗೆ ವಿವರಣೆಯನ್ನೇ ಕೊಟ್ಟಿಲ್ಲ. ತಪ್ಪುಗಳ ಮೇಲೆ ತಪ್ಪುಗಳು ಆಗಿವೆ. ಆದರೆ ತಾವು ಅಮಾಯಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಅನ್ನಿಸುತ್ತದೆ ಎಂದರು.
ನಿಮ್ಮ ಮೇಲಿನ ಆಪಾದನೆ ರದ್ದಾಗಲು ಸಾಧ್ಯವಿಲ್ಲ. ತಪ್ಪು ಇಲ್ಲಾಂದ್ರೆ ಸೈಟ್ ವಾಪಸ್ ಕೊಟ್ಟಿದ್ದು ಏಕೆ? ಕಳ್ಳ ಮಾಲು ವಾಪಸ್ ಕೊಡ್ತಾರೆ. ಬಂಗಾರ, ಕಾರು ಕಳ್ಳತನ ಆಗುತ್ತದೆ. ಅದನ್ನು ವಾಪಸ್ ಕೊಟ್ಟರೆ ಆಪಾದನೆ ಹೋಗುವುದಿಲ್ಲ. ಶಿಕ್ಷೆ ಆಗಿಯೇ ಆಗುತ್ತದೆ. ನೀವು ನಿರಪರಾಧಿಯಾಗಿ ಮತ್ತೆ ಸಿಎಂ ಆಗಿ, ಅಲ್ಲಿಯವರೆಗೆ ರಾಜೀನಾಮೆ ಕೊಡಿ ಎಂದು ಶೆಟ್ಟರ್ ಒತ್ತಾಯಿಸಿದರು.
ಹೆಚ್ಚು ರಿಯಾಕ್ಷನ್ ಕೊಡಲು ಹೋಗುವುದಿಲ್ಲ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಅದರ ಬಗ್ಗೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಅದರ ಬಗ್ಗೆ ಯಾರೂ ನನ್ನ ಜೊತೆ ಸಮಾಲೋಚನೆ ಮಾಡಿಲ್ಲ. ಆ ಕುರಿತು ಹೆಚ್ಚು ರಿಯಾಕ್ಷನ್ ಕೊಡಲು ಹೋಗುವುದಿಲ್ಲ. ಅಲ್ಲಿ ಒಳಗೆ ಏನು ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ. ಎಲ್ಲರೊಂದಿಗೆ ಮಾತನಾಡಿ ರಿಯಾಕ್ಷನ್ ಕೊಡುವೆ ಎಂದರು.
ಇದನ್ನೂ ಓದಿ : ರಾಜೀನಾಮೆ ಕೊಡದೆ ಸಿದ್ದರಾಮಯ್ಯ ಭಂಡತನ ಪ್ರದರ್ಶನ: ಜಗದೀಶ ಶೆಟ್ಟರ್ - Jagadish Shettar