ಬೆಂಗಳೂರು: ''ಜೆಡಿಎಸ್ನ ಗುರುತು ಬದಲಾಗಬೇಕಿದೆ. ತೆನೆ ಹೊತ್ತ ಮಹಿಳೆ ಇದ್ದ ಜಾಗದಲ್ಲಿ ಪೆನ್ಡ್ರೈವ್ ಹೊತ್ತ ಮಹಿಳೆ ಬರಬೇಕಿದೆ. ರಾಜ್ಯದ ಜನರು ಜೆಡಿಎಸ್ ಅನ್ನು ಪೆನ್ಡ್ರೈವ್ ಹೊತ್ತ ಮಹಿಳೆ ಪಕ್ಷ ಎಂದು ಕರೆಯುತ್ತಿದ್ದಾರೆ'' ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಮಾಜಿ ಪ್ರಧಾನಿಯವರ ಕುಟುಂಬವನ್ನು ಜನರು ಈಗ ಬೇರೆಯದ್ದೇ ರೀತಿಯಲ್ಲಿ ಗುರುತಿಸುತ್ತಿದ್ದಾರೆ. ಪೆನ್ಡ್ರೈವ್ ಕುಟುಂಬ ಎಂದು ಜರಿಯುತ್ತಿದ್ದಾರೆ. ಡಿಕೆ ಬ್ರದರ್ಸ್ 420 ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ, ನಾನು ಅವರ ಕುಟುಂಬವನ್ನು ಹಾಗೆ ಕರೆಯುವುದಿಲ್ಲ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗುತ್ತದೆ'' ಎಂದು ಪರೋಕ್ಷವಾಗಿ ಟೀಕಿಸಿದರು.
ಮಿತ್ರರಿಂದಲೇ ಪೆನ್ಡ್ರೈವ್ ಬಿಡುಗಡೆ: ''ಮಾಜಿ ಪ್ರಧಾನಿಗಳ ಕುಟುಂಬವನ್ನು ಇಂದು ದೇಶದ ಜನರು ಹೇಗೆಲ್ಲಾ ಹೊಗಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಅವರ ಮನಸ್ಸಿಗೆ ಸಮಾಧಾನವಾಗುತ್ತದೆ ಎಂದಾದರೆ, ನಮ್ಮನ್ನು ಇನ್ನಷ್ಟು ಬೈದುಕೊಳ್ಳಲಿ. ಆದರೆ, ರಾಜ್ಯದ ಮಹಿಳೆಯರ ಮಾನ ರಕ್ಷಣೆಯೇ ನಮ್ಮ ಗುರಿ. ಅವರ ಮೈತ್ರಿ ಪಕ್ಷದವರೇ ಪೆನ್ಡ್ರೈವ್ ಅನ್ನು ಬಿಡುಗಡೆ ಮಾಡಿದ್ದಾರೆ. ಅವರನ್ನು ಟೀಕಿಸಲಾಗದೇ, ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ'' ಎಂದು ತಿರುಗೇಟು ನೀಡಿದರು.
ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರನ್ನು ಎಳೆದು ತರುತ್ತಿರುವುದು ಏಕೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ''ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳು. ಪ್ರಧಾನಿ ನರೇಂದ್ರ ಮೋದಿ ಅವರು ಎನ್ಡಿಎ ಕೂಟದ ಮುಖ್ಯಸ್ಥರು. ಕೂಟದ ನಾಯಕರನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ. ಹೀಗಾಗಿ, ಅವರನ್ನು ಈ ಪ್ರಕರಣದಲ್ಲಿ ಪ್ರಶ್ನಿಸಲಾಗುತ್ತಿದೆ. ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಹಾಗಾದರೆ, ನೇಹಾ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಎಳೆದು ತರುತ್ತಿರುವುದು ಸರಿಯೇ'' ಎಂದು ಪ್ರಶ್ನಿಸಿದರು.
ಬಿಜೆಪಿ, ಹೆಚ್ಡಿಕೆ ಬೇಡ ಅಂದಿದ್ರು: ''ರಾಸಲೀಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಿಜೆಪಿಯೇ ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ ಕುಮಾರಸ್ವಾಮಿ ಅವರೂ ಬೇಡ ಅಂದಿದ್ದರು. ಆದಾಗ್ಯೂ ಅವರನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಈಗ ಪೆನ್ಡ್ರೈವ್ ವಿಚಾರದಿಂದ ಕರ್ನಾಟಕದ ಮಾನ ಹರಾಜಾಗುತ್ತಿದೆ. ಹಾಸನದ ಬಿಜೆಪಿ ಅಧ್ಯಕ್ಷರೇ ಪ್ರಜ್ವಲ್ ವಿರುದ್ಧ ಪಕ್ಷದ ಹೈಕಮಾಂಡ್ಗೆ ಪತ್ರ ಬರೆದಿದ್ದರು. ಇಂತಹ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲ್ಲ'' ಎಂದು ವಾಗ್ದಾಳಿ ನಡೆಸಿದರು.
''ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ. ಅವರ ಮಿತ್ರರಿಂದಲೇ ಪೆನ್ಡ್ರೈವ್ ಬಹಿರಂಗವಾಗಿದೆ. ಅದನ್ನು ಎದುರಿಸೋಕೆ ಅವರಿಂದ ಆಗುತ್ತಿಲ್ಲ. ಹೀಗಾಗಿ ಅವರು ವಿಷಯಾಂತರ ಮಾಡುತ್ತಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಮಾಧ್ಯಮಗೋಷ್ಠಿ ನಡೆಸುವ ಮಾಜಿ ಪ್ರಧಾನಿ ದೇವೇಗೌಡರು, ಈಗ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲಿ'' ಎಂದು ಆಗ್ರಹಿಸಿದರು.
ಇದನ್ನೂ ಓದಿ: ಲುಕ್ ಔಟ್ ನೊಟೀಸ್ ಜಾರಿ: ಪ್ರಜ್ವಲ್ ರೇವಣ್ಣ ವಿಚಾರಣೆಗೆ ಗೈರಾದರೆ ಬಂಧನ ಸಾಧ್ಯತೆ - Look out notice issued