ಆನೇಕಲ್(ಬೆಂಗಳೂರು ನಗರ): ಜೆಡಿಎಸ್ನವರಿಗೆ ಆರೋಪ ಮಾಡುವುದೇ ಕೆಲಸ. ಮಾಜಿ ಸಿಎಂ ಕುಮಾರಸ್ವಾಮಿ ಎಷ್ಟು ಖರ್ಚು ಮಾಡಿದ್ದಾರೆ, ಎಷ್ಟು ಲೂಟಿ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಕೋವಿಡ್ ಸಮಯದಲ್ಲಿ ಹುರುಳಿ ಹಾಗೂ ರಾಗಿ ಬೆಳೆದು ಅದರಲ್ಲೇ ಅವರು ಸಂಪಾದನೆ ಮಾಡಿದ್ದಾರೆ ಅಲ್ವಾ? ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದರು.
ಹೆನ್ನಾಗರ ಗ್ರಾ.ಪಂನಲ್ಲಿಂದು ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಚಾಲನೆ ಮತ್ತು ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ, ವಿಶೇಷ ಚೇತನರಿಗೆ ತ್ರಿಚಕ್ರ ವಾಹನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗು ಚೆಕ್ ವಿತರಿಸಿದ ನಂತರ ಅವರು ಮಾಧ್ಯಮವರೊಂದಿಗೆ ಮಾತನಾಡಿದರು.
ಕೆಂದ್ರದಿಂದ ರಾಜ್ಯದ ಜಿಎಸ್‌ಟಿ ಪಾಲು ನೀಡಿದರೆ, ಈಗಿರುವ ಗೃಹಲಕ್ಷ್ಮಿ ಯೋಜನೆ ಸಹಾಯಧನ 2,000 ರೂ ಬದಲಿಗೆ 4,000 ರೂ ನೀಡಲಾಗುವುದು ಎಂದು ಅವರು ಹೇಳಿದರು. ಕೇಂದ್ರದಲ್ಲಿ ಬಿಜೆಪಿ ಸುಳ್ಳು, ನಾಟಕದಿಂದ 10 ವರ್ಷದಿಂದ ಅಧಿಕಾರ ನಡೆಸುತ್ತಿದೆ ಎಂದರು.
ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳಿಗೆ ಸಹಕಾರ ನೀಡಿಲ್ಲ: ಕೇಂದ್ರ ಬಿಜೆಪಿ ಸರ್ಕಾರದಿಂದ ಜಿಎಸ್‌ಟಿ ಹಾಗೂ ಇತರ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿದ್ದೇನೆ. ಮಹದಾಯಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿಲ್ಲ. ಕೃಷ್ಣಾ ಯೋಜನೆಗೆ ಹಣ ಕೊಟ್ಟಿಲ್ಲ. ಹತ್ತು ವರ್ಷದಿಂದ ಕರ್ನಾಟಕದ ಯಾವುದೇ ಕುಡಿಯುವ ನೀರಿನ ಯೋಜನೆಗಳಿಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇಡೀ ದಕ್ಷಿಣ ಭಾರತ ಹಾಗೂ ಕರ್ನಾಟಕ ಕುಟುಂಬ ಕಲ್ಯಾಣ ನಿಯಂತ್ರಣದಲ್ಲಿ ಮೊದಲನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹದಲ್ಲಿಯೂ ದೇಶದ 2ನೇ ರಾಜ್ಯ ಕರ್ನಾಟಕ. ಅದೇ ಉತ್ತರ ಭಾರತ ಅಭಿವೃದ್ಧಿಗೆ ನಮ್ಮ ಬೆವರಿನ ಪಾಲನ್ನು ಬೇಕಾಬಿಟ್ಟಿ ಕೇಂದ್ರ ಖರ್ಚು ಮಾಡುತ್ತಿದೆ. ನಮ್ಮ ತೆರಿಗೆ ಪಾಲನ್ನು ನಾವು ಕೇಳಿದರೆ ಉತ್ತರ ಭಾರತದವರಿಗೆ ಉರಿಯೇ. ನಾವು ನಮ್ಮ ಬೆವರಿನ ಪಾಲಿಗೆ ಭಿಕ್ಷೆ ಬೇಡಬೇಕಾ ಎಂದು ಹರಿಹಾಯ್ದರು.
ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಚಿವ ಕೆ.ಎನ್.ರಾಜಣ್ಣ