ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಟೀಕೆ ಮಾಡುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಸಲಹೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ನಿನ್ನೆಯಿಂದ ಪ್ರಾರಂಭವಾಗಿರುವ ಎನ್ಡಿಎ ಪಾದಯಾತ್ರೆ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 4 ತಿಂಗಳು ಆಗಿದೆ. ವಾಲ್ಮೀಕಿ ಹಗರಣದಲ್ಲಿ ಚಂದ್ರಶೇಖರನ್ ಅವರನ್ನು ಬಲಿ ತೆಗೆದುಕೊಂಡಿದೆ. ಮುಡಾ ಹಗರಣದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ ಎಂದು ದೂರಿದರು.
ಯಾದಗಿರಿ ಶಾಸಕ ಹಾಗೂ ಅವರ ಮಗ 30 ಲಕ್ಷ ರೂ. ಬೇಡಿಕೆ ಇಟ್ಟಿದೇ ಪಿಎಸ್ಐ ಪರಶುರಾಮ್ ಸಾವಿಗೆ ಕಾರಣ ಎಂದು ಮೃತನ ಗರ್ಭಿಣಿ ಪತ್ನಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ನಾವು ವಿರೋಧ ಪಕ್ಷವಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ವಾಲ್ಮೀಕಿ, ಮುಡಾ ಹಾಗೂ ಯಾದಗಿರಿ ಹಗರಣ ನಡೆದಿದೆ. ಆದರೆ ಇದರ ಬಗ್ಗೆ ಮಾತನಾಡದ ಮಧು ಬಂಗಾರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರದ್ದು, ಬಿಚ್ಚಿಡುತ್ತೇನೆ. ವಿಮಾನ ನಿಲ್ದಾಣದ ಹಗರಣವನ್ನು ಹೊರಗಡೆ ತರುತ್ತೇನೆ ಎಂದು ಹೇಳುತ್ತಿರುವುದು ಹೊಸದೇನಲ್ಲ ಎಂದು ಹರಿಹಾಯ್ದರು.
ಹಿಂದೆ ಶಿಕ್ಷಣ ಸಚಿವರಾಗಿ ಅನೇಕರು ಕೆಲಸ ಮಾಡಿದ್ದಾರೆ. ಸಚಿವರು ಆಚಾರವಿಲ್ಲದ ನಾಲಿಗೆ ಎಂದು ಏನೇನೂ ಹೇಳುತ್ತಿದ್ದಾರೆ. ಅವರಿಗಿಂತ ಚೆನ್ನಾಗಿ ಮಾತನಾಡಲು ನಮಗೂ ಬರುತ್ತದೆ. ಆದರೆ ನಮ್ಮ ಸಂಸ್ಕೃತಿ ಅದಲ್ಲ. ಅವರ ಸರ್ಕಾರ ಬಂದು ಇಷ್ಟು ದಿನವಾದರೂ ಅವರು ಏನೂ ಮಾಡಿಲ್ಲ. ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಮಾಡಿಸಲು ಟೆಂಡರ್ ಮಾಡಿಸಲಾಗಿದೆ. ಆದರೆ ಗುತ್ತಿಗೆದಾರನಿಗೆ ಇವರು ಹಣ ಬಿಡುಗಡೆ ಮಾಡಿಸಿಲ್ಲ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದು ಏನೂ ಮಾಡಿದ್ದೀರಿ: ಚುನಾವಣೆ ನಂತರ ನಾನು, ಮಧು ಬಂಗಾರಪ್ಪ, ಎಂ.ಬಿ. ಪಾಟೀಲ್, ಸಿಎಂ ಮನೆಗೆ ಹೋಗಿದ್ದು ನಮ್ಮ ಕೆಲಸಕ್ಕೆ ಅಲ್ಲ, ಕ್ಷೇತ್ರದ ಅಭಿವೃದ್ಧಿಗೆ. ಆದರೆ ಈ ಬಗ್ಗೆ ಅವರು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ತಾಂತ್ರಿಕತೆಯ ಕುರಿತು ರೈರ್ಟ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಅವರು, ದೆಹಲಿಗೆ ಹೋಗಿ ತಮ್ಮ ವರದಿಯನ್ನು ನೀಡಲು ಕನಿಷ್ಠ ಟ್ರಾವೆಲ್ ಚಾರ್ಜ್ ನೀಡದೆ ಸತಾಯಿಸುತ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದು ಏನೂ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಶಿಕ್ಷಣ ಸಚಿವರಾಗಿ ಹೆಸರು ಗಳಿಸುವ ಕೆಲಸ ಮಾಡಿ: ನಾನು ತುಂಗಾ ನದಿಗೆ ತಡೆಗೋಡೆ ಸೇರಿದಂತೆ ಅನೇಕ ಕೆಲಸ ಮಾಡಿದ್ದೇನೆ. ಆದರೆ ನೀವು ಏನು ಮಾಡಿದ್ದೀರಿ. ಶಿಕ್ಷಣ ಸಚಿವರಾಗಿ 11 ಸಾವಿರ ಶಿಕ್ಷಕರ ನೇಮಕ ಮಾಡಿದ್ದೇನೆ ಎಂದು ಹೇಳುತ್ತಿದ್ದೀರಿ, ಹಿಂದೆ ನಮ್ಮ ಸರ್ಕಾರ ಇದ್ದಾಗ ಮಾಡಿದ ನೇಮಕ ವಿರುದ್ಧ ಓರ್ವರು ಕೋರ್ಟ್ಗೆ ಹೋಗಿದ್ದರು. ಸದ್ಯ ಕೋರ್ಟ್ ತಡೆಯಾಜ್ಞೆ ತೆರವು ಮಾಡಿದನ್ನು ಈಗ ನಾವೇ ನೇಮಕ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದೀರಿ. ಸಿಆರ್ಆರ್ ಸಮಸ್ಯೆ ಬಗೆಹರಿಯಬೇಕೆಂದು ಸರ್ಕಾರದ ವಿರುದ್ಧ ಶಿಕ್ಷಕರು ಸದ್ಯದಲ್ಲೇ ಪ್ರತಿಭಟನೆ ನಡೆಸಲಿದ್ದಾರೆ. ಶಿಕ್ಷಣ ಸಚಿವರಾಗಿ ಹೆಸರು ಗಳಿಸುವ ಕೆಲಸ ಮಾಡಿ, ಅದನ್ನು ಬಿಟ್ಟು ಸವಾಲು ಹಾಕುವುದನ್ನು ಬಿಡಬೇಕು ಎಂದು ಟಾಂಗ್ ಕೊಟ್ಟರು.
ಮಧು ಬಂಗಾರಪ್ಪ ನಮ್ಮ ಸಹೋದರನ ಬಗ್ಗೆ ಮಾಡಿರುವ ಆರೋಪ ಸುಳ್ಳು. ಒಂದೆರಡು ಪ್ರಕರಣ ಈಗ ಹೈಕೋರ್ಟ್ ನಲ್ಲಿದೆ. ಉಳಿದಂತೆ ಎಲ್ಲಾ ಪ್ರಕರಣಗಳು ಖುಲಾಸೆಯಾಗಿವೆ. ಚೋಟ ಸಹಿ ಅವರು ಮಾಡಿರಬೇಕು, ಚೋಟ ಸಹಿ ಮಾಡುವುದು ನಮಗೆ ಗೂತ್ತಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ನೋ ರೀ ಶಫಲ್, ಯಾವುದೇ ಶಫಲ್ ಇಲ್ಲ, ಚೀಫ್ ಮಿನಿಸ್ಟರ್ ಹೇಳುತ್ತಿದ್ದೇನೆ: ಸಿಎಂ ಸಿದ್ದರಾಮಯ್ಯ - CM Siddaramaiah