ಇತ್ತೀಚೆಗೆ ಬೆಂಗಳೂರಿನ ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನೇಪಾಳ ಮೂಲದ ಮಹಿಳೆ ಕೊಲೆ ಪ್ರಕರಣ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಮಹಿಳೆ ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿರಿಸಿ ಆರೋಪಿ ಪರಾರಿಯಾಗಿದ್ದ. ರಾಜ್ಯದಲ್ಲಿ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ನಡೆದ ಭಯಾನಕ ಕೊಲೆ ಪ್ರಕರಣಗಳ ಮಾಹಿತಿ ಇಲ್ಲಿದೆ.
ಮಹಾಲಕ್ಷ್ಮಿ ಕೊಲೆ - 21 ಸೆಪ್ಟೆಂಬರ್, 2024: ನೇಪಾಳ ಮೂಲದ 29 ವರ್ಷದ ಮಹಿಳೆ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಕೊಲೆ ಆರೋಪಿಯು ಮಹಾಲಕ್ಷ್ಮಿಯ ದೇಹದ ಭಾಗಗಳನ್ನು ಸುಮಾರು 59 ತುಂಡುಗಳಾಗಿ ಕತ್ತರಿಸಿ ಮನೆಯಲ್ಲಿನ ಫ್ರಿಡ್ಜ್‌ನಲ್ಲಿ ತುಂಬಿ ಪರಾರಿಯಾಗಿದ್ದ. ಮಹಿಳೆಯ ಸಹೋದ್ಯೋಗಿ, ಒಡಿಶಾ ಮೂಲದ ಮುಕ್ತಿರಾಜನ್ ರಾಯ್ ಶಂಕಿತ ಆರೋಪಿಯಾಗಿದ್ದು, ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 25ರಂದು, ಒಡಿಶಾದ ಧುಸುರಿ ಪೊಲೀಸರು, ಭದ್ರಕ್ ಜಿಲ್ಲೆಯಲ್ಲಿ ಮುಕ್ತಿ ರಂಜನ್ ರಾಯ್ (30) ಮೃತದೇಹ ಪತ್ತೆ ಮಾಡಿದ್ದಾರೆ.
ಮಾಗಡಿ 4 ವರ್ಷದ ಬಾಲಕಿ ಅತ್ಯಾಚಾರ, ಕೊಲೆ: ಜುಲೈ 23, 2024ರಂದು ನಾಲ್ಕು ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣವನ್ನು ಬೆಚ್ಚಿಬೀಳಿಸಿತ್ತು. ಆರೋಪಿಯು ಅಪ್ರಾಪ್ತೆಗೆ ಐಸ್ ಕ್ರೀಂ ನೀಡುವ ಆಮಿಷವೊಡ್ಡಿ ಕರೆದೊಯ್ದು ದುಷ್ಕೃತ್ಯ ಎಸಗಿದ್ದ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.
14 ಆಗಸ್ಟ್, 2024ರಂದು ಸಮೀರ್ ಉಳ್ಳಾಲ ಕೊಲೆ: ಮಂಗಳೂರಿನ ಉಳ್ಳಾಲದಲ್ಲಿ ಕೊಲೆ ಆರೋಪಿಯನ್ನು ಎದುರಾಳಿ ಗ್ಯಾಂಗ್ ಅಟ್ಟಾಡಿಸಿ ಹತ್ಯೆ ಮಾಡಿತ್ತು. ಇಲ್ಯಾಸ್ ಎಂಬಾತನ ಕೊಲೆ ಸೇಡಿಗಾಗಿ ಉಳ್ಳಾಲ ಕಡಾಪುರ ನಿವಾಸಿ ಸಮೀರ್ (35) ಎಂಬವನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿತ್ತು.
ರಾತ್ರಿ 10 ಗಂಟೆ ಸುಮಾರಿಗೆ ತಾಯಿಯೊಂದಿಗೆ ಕಲ್ಲಾಪುವಿನ ರೆಸ್ಟೊರೆಂಟ್ಗೆ ತನ್ನ ತಾಯಿಯೊಂದಿಗೆ ಊಟಕ್ಕೆ ಬಂದಿದ್ದ ಸಮೀರ್ನನ್ನು ಕಾರಿನಲ್ಲಿ ಹಿಂಬಾಲಿದ ತಂಡ, ಆತ ಕೆಳಗಿಳಿಯುತ್ತಿದ್ದಂತೆ ಹಿಂದಿನಿಂದ ತಲ್ವಾರ್‌ನಿಂದ ಕೊಲೆ ಮಾಡಲು ಯತ್ನಿಸಿತ್ತು. ತಕ್ಷಣ ದಾಳಿ ಅರಿತುಕೊಂಡ ಸಮೀರ್, ಪಾರಾಗಿ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದ. ಆದರೆ, ಈ ವೇಳೆ ಐವರು ಸದಸ್ಯರ ತಂಡ ಬೆನ್ನಟ್ಟಿದ್ದು, ಕಲ್ಲಾಪು ಜಂಕ್ಷನ್ನಿಂದ 500 ಮೀಟರ್ ದೂರದಲ್ಲಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇಲ್ಯಾಸ್ ಕೊಲೆಗೆ ಪ್ರತೀಕಾರವಾಗಿ ಸಮೀರ್‌ನ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು.
ರೇಣುಕಾಸ್ವಾಮಿ ಹತ್ಯೆ: 9 ಜೂನ್, 2024ರಂದು ಬೆಂಗಳೂರಿನಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆದು, ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 33 ವರ್ಷದ ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ರೇಣುಕಾಸ್ವಾಮಿ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹಾಗೆಯೇ, ದರ್ಶನ್ ಅವರ ಅಭಿಮಾನಿಯಾಗಿದ್ದ. ಕೊಲೆ ಬಳಿಕ ಮೃತದೇಹವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು.
ನೇಹಾ ಹಿರೇಮಠ ಕೊಲೆ ಪ್ರಕರಣ: ಏಪ್ರಿಲ್ 18, 2024ರಂದು, ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 24 ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆದಿತ್ತು. ಪ್ರಕರಣವು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಆರೋಪಿ ಬೆಳಗಾವಿ ಜಿಲ್ಲೆಯ ಫಯಾಜ್ ಕೊಂಡುನಾಯ್ಕ್ (24) ಎಂಬಾತನನ್ನು ಬಂಧಿಸಲಾಗಿತ್ತು. ಈತ ನೇಹಾಳ ಮಾಜಿ ಸ್ನೇಹಿತ ಎಂದು ಹೇಳಿಕೊಂಡಿದ್ದು, ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದ. ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕಿಮ್ಸ್ ವೈದ್ಯರ ಪ್ರಕಾರ, ಆಸ್ಪತ್ರೆಗೆ ಕರೆತರುವ ಮುನ್ನವೇ ನೇಹಾ ಮೃತಳಾಗಿದ್ದು, ಆಕೆಯ ದೇಹದ ಮೇಲೆ 10 ಬಾರಿ ಇರಿದಿರುವ ಗಾಯಗಳಾಗಿತ್ತು.
ಅಂಜಲಿ ಅಂಬಿಗೇರ್ ಹತ್ಯೆ: ಗಿರೀಶ್ ಸಾವಂತ್ ಅಲಿಯಾಸ್ ವಿಶ್ವ ಎಂಬ 21 ವರ್ಷದ ಆಟೋರಿಕ್ಷಾ ಚಾಲಕ ಮೇ 15, 2024ರಂದು ಧಾರವಾಡದಲ್ಲಿ ತನ್ನ ಮಾಜಿ ಸಹಪಾಠಿ ಅಂಜಲಿ ಅಂಬಿಗೇರ್ ಎಂಬವಳನ್ನು ಇರಿದು ಕೊಲೆ ಮಾಡಿದ್ದ. ಬೆಳ್ಳಂಬೆಳಗ್ಗೆ ಅಂಜಲಿ ಮನೆಗೆ ನುಗ್ಗಿದ ಗಿರೀಶ್, ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಮನೆಯ ಒಳಪ್ರವೇಶಿಸದಂತೆ ಅಂಜಲಿಯ ಸಹೋದರಿ ಮತ್ತು ಅಜ್ಜಿ ಪ್ರತಿರೋಧವೊಡ್ಡಿದರೂ ಕೂಡ, ಮನೆಗೆ ನುಗ್ಗಿ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕು ಇರಿದಿದ್ದ. ತೀವ್ರ ಗಾಯಗೊಂಡ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಗಿರೀಶ್ ಮತ್ತು ಅಂಜಲಿ ಒಂದು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಅವರು ದೂರವಾಗಿದ್ದರು. ಮೈಸೂರಿಗೆ ಹೋಗೋಣವೆಂಬ ಗಿರೀಶ್ನ ಮನವಿಯನ್ನು ಅಂಜಲಿ ತಿರಸ್ಕರಿಸಿದ್ದಳು ಎಂದು ವರದಿಯಾಗಿದೆ.
ಗದಗ ಭೀಕರ ಸುಪಾರಿ ಹತ್ಯೆ ಪ್ರಕರಣ: 19 ಏಪ್ರಿಲ್, 2024ರಂದು ಗದಗ ಪಟ್ಟಣದಲ್ಲಿ ಬಿಜೆಪಿ ಮುಖಂಡೆಯ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಏಪ್ರಿಲ್ 19ರಂದು ಮುಂಜಾನೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳು ಗದಗದ ಚನ್ನಮ್ಮ ವೃತ್ತದ ಬಳಿ ದಾಸರ ಓಣಿಯಲ್ಲಿನ ಮನೆಯ ಮೊದಲ ಮಹಡಿಯಲ್ಲಿದ್ದ ಕಿಟಕಿಯೊಂದನ್ನು ಒಡೆದು ಒಳ ಪ್ರವೇಶಿಸಿದ್ದರು. ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆಯ ಮಗ ಕಾರ್ತಿಕ ಬಾಕಳೆ, ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸಂಬಂಧಿಕರಾದ ಪರಶುರಾಮ್ ಜಗನ್ನಾಥ ಹಾದಿಮನಿ, ಅವರ ಪತ್ನಿ ಲಕ್ಷ್ಮೀಬಾಯಿ ಹಾದಿಮನಿ ಮತ್ತು ಮಗಳು ಆಕಾಂಕ್ಷಾ ಹಾದಿಮನಿ ಎಂಬವರು ಕೊಲೆಗೀಡಾಗಿದ್ದರು.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆಯ ಮಗನೇ ಆದ ವಿನಾಯಕ್ ಎಂಬಾತ ತನ್ನ ಹೆತ್ತವರು ಮತ್ತು ಮಲತಾಯಿಯನ್ನು ಕೊಲ್ಲಲು 65 ಲಕ್ಷ ರೂ. ಸುಪಾರಿ ನೀಡಿರುವುದು ತನಿಖೆಯಿಂದ ಗೊತ್ತಾಗಿತ್ತು. ಆದರೆ, ಆರೋಪಿಗಳ ಪ್ಲಾನ್ ತಪ್ಪಾಗಿ, ಉದ್ದೇಶಿತ ಜನರ ಬದಲಿಗೆ ಮನೆಗೆ ಬಂದಿದ್ದ ಮೂವರು ಸಂಬಂಧಿಕರನ್ನೂ ಹತ್ಯೆ ಮಾಡಿದ್ದರು.
ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಪ್ರಕರಣ: ಮೇ 14, 2024ರಂದು, ಉಜ್ಬೇಕಿಸ್ತಾನ್‌ನ ಜರೀನಾ ಉಟ್ಕಿರೋವ್ನಾ ಎಂಬ 27 ವರ್ಷದ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ಹೋಟೆಲ್ವೊಂದರಲ್ಲಿ ಅನುಮಾನಾಸ್ಪದವಾಗಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್ ಪ್ರದೇಶದ ಸ್ಯಾಂಕಿ ರಸ್ತೆಯಲ್ಲಿರುವ ಬಿಡಿಎ ಪ್ರಧಾನ ಕಚೇರಿಯ ಪಕ್ಕದ ಹೋಟೆಲ್‌ನಲ್ಲಿ ಘಟನೆ ನಡೆದಿತ್ತು. ಕೊಲೆ ಆರೋಪದ ಮೇಲೆ ಹೋಟೆಲ್‌ನ ಇಬ್ಬರು ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಅಸ್ಸಾಂ ಮೂಲದ ಆರೋಪಿಗಳಾದ ಅಮೃತ್ ಸೋನಾ ಮತ್ತು ರಾಬರ್ಟ್ ಎಂಬವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು. ಇವರಿಬ್ಬರೂ ಸುಮಾರು ಒಂದು ವರ್ಷದಿಂದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಮಂಡ್ಯದಲ್ಲಿ ಮಹಿಳೆ, ಮೊಮ್ಮಗಳ ಹತ್ಯೆ: 2024ರ ಮಾರ್ಚ್ 19ರಂದು ಮಹಿಳೆ ಮತ್ತು ಆಕೆಯ ಮೊಮ್ಮಗಳು ಭೀಕರವಾಗಿ ಕೊಲೆಯಾದ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕೊಲೆ ಬಳಿಕ ದೇಹದ ಭಾಗಗಳನ್ನು ಕತ್ತರಿಸಿ ಕೆರೆಗೆ ಎಸೆಯಲಾಗಿತ್ತು.
ಉಡುಪಿಯ ಗಗನಸಖಿ ಕುಟುಂಬ ಹತ್ಯೆ: 12 ನವೆಂಬರ್, 2023ರಂದು ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ತನ್ನ ಸಹೋದ್ಯೋಗಿ ಹಾಗೂ ಕುಟುಂಬಸ್ಥರನ್ನು ಹತ್ಯೆ ಮಾಡಿದ ಘಟನೆ ಉಡುಪಿಯ ನೇಜಾರು ಗ್ರಾಮದಲ್ಲಿ ನಡೆದಿತ್ತು. ಗಗನಸಖಿ ಐನಾಜ್ ಎಂ (21), ಆಕೆಯ ತಾಯಿ ಹಸೀನಾ ಎಂ (47), ಸಹೋದರಿ ಅಫ್ನಾನ್ ಎಂ.ಎನ್. (23) ಹಾಗೂ ಸಹೋದರ ಅಸೀಮ್ ಎಂ. (14) ಎಂಬಾತನನ್ನು ಚಾಕುವಿನಿಂದ ಇರಿದು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಜೈನ ಮುನಿ ಹತ್ಯೆ ಪ್ರಕರಣ: 05 ಜುಲೈ, 2023ರಂದು ಬೆಳಗಾವಿಯ ಚಿಕ್ಕೋಡಿಯ ಗ್ರಾಮದಲ್ಲಿನ ಆಶ್ರಮದಿಂದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ಬಳಿಕ ಮುನಿಯವರನ್ನು ಕೊಲೆ ಮಾಡಿ, ದೇಹವನ್ನು 400 ಅಡಿ ಬೋರ್‌ವೆಲ್‌ನಲ್ಲಿ ವಿಲೇವಾರಿ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತದನಂತರ, ಪ್ರಕರಣದ ತನಿಖೆಯನ್ನು ಸರ್ಕಾರವು ಜುಲೈ 19ರಂದು ಸಿಐಡಿಗೆ ವಹಿಸಿದೆ.
ಚಾಮರಾಜನಗರದಲ್ಲಿ ಪ್ರತೀಕಾರದ ಹತ್ಯೆ: 2022ರ ಜೂನ್ ತಿಂಗಳಿನಲ್ಲಿ, ಕಾಲುವೆಗಳ ಬಳಿ ಇಬ್ಬರು ಮಹಿಳೆಯರ ದೇಹದ ಭಾಗಗಳನ್ನು ಎಸೆದಿರುವುದು ಬೆಳಕಿಗೆ ಬಂದಿತ್ತು. ಪರಸ್ಪರ ಸುಮಾರು 25 ಕಿಮೀ ದೂರ ಅಂತರದಲ್ಲಿ ಎರಡೂ ಶವಗಳನ್ನು ವಿಲೇವಾರಿ ಮಾಡಲಾಗಿತ್ತು. ಅಲ್ಲದೆ, ಶವಗಳ ರುಂಡ ಇರಲಿಲ್ಲ, ಮುಂಡಗಳು ಮಾತ್ರ ದೊರಕಿದ್ದವು. ತನಿಖೆ ಕೈಗೊಂಡ ಚಾಮರಾಜನಗರ ಪೊಲೀಸರು, ವಾರಗಳ ನಂತರ ಮೃತದೇಹ ಯಾರದ್ದು ಎಂಬುದನ್ನು ಪತ್ತೆ ಮಾಡಿದ್ದರು. ಮಹಿಳೆಯ ಫೋನ್ ಕರೆಗಳ ದಾಖಲೆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. 35 ವರ್ಷದ ಟಿ.ಸಿದ್ದಲಿಂಗಪ್ಪ ಮತ್ತು ಆತನ ಗೆಳತಿ ಚಂದ್ರಕಲಾಳನ್ನು ಬಂಧಿಸಲಾಯಿತು. ಆರೋಪಿಗಳು ಮೂವರು ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೆ, ಅವರ ಟಾರ್ಗೆಟ್ ಲಿಸ್ಟ್ನಲ್ಲಿ ಇನ್ನೂ ಐವರು ಮಹಿಳೆಯರಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಚಂದ್ರಕಲಾಳನ್ನು ವೇಶ್ಯಾವಾಟಿಕೆಗೆ ತಳ್ಳಿರುವುದೇ ಮಹಿಳೆಯರ ಹತ್ಯೆಗೆ ಕಾರಣ ಎಂಬುದನ್ನು ತನಿಖೆ ವೇಳೆ ಆರೋಪಿಗಳು ಬಿಚ್ಚಿಟ್ಟಿದ್ದರು.
ಇದನ್ನೂ ಓದಿ: ಬೆಳಗಾವಿ: 3 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಅಪರಾಧಿಗೆ ಗಲ್ಲು ಶಿಕ್ಷೆ - Death Sentence