ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಮಳೆಗೆ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಅಂಗಡಿಯಲ್ಲಿದ್ದವರು ಹಾಗೂ ಗ್ರಾಹಕರೂ ಸೇರಿ ಐದಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆವ್ಯಕ್ತವಾಗಿದೆ.
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿತವಾಗತೊಡಗಿದೆ. ಅಂಕೋಲಾದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ಅಂಗಡಿಯಲ್ಲಿ ವಾಸ ಮಾಡಿಕೊಂಡಿದ್ದ ಒಂದೇ ಕುಟಂಬದ ಐವರು ಹಾಗೂ ಗ್ರಾಹಕರು ಮಣ್ಣಿನಡಿ ಸಿಲುಕಿದ್ದಾರೆ. ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ (11), ಅವಾಂತಿಕಾ (6), ಜಗನ್ನಾಥ (55) ಎಂಬುವರು ನಾಪತ್ತೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.