ಕಾರವಾರ: ಶಿರೂರು ಮಣ್ಣು ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಲಾರಿ ಚಾಲಕ ಕೇರಳ ಮೂಲದ ಅರ್ಜುನ್ ಅವರ ಸ್ವಿಚ್ ಆಫ್ ಆಗಿದ್ದ ಮೊಬೈಲ್ ರಿಂಗ್ ಆಗಿದೆ. ಆದರೆ, ಘಟನಾ ಸ್ಥಳದಲ್ಲಿ ಮಾತ್ರ ಕಾರ್ಯಾಚರಣೆ ನಿಧಾನಗತಿಯಲ್ಲಿದ್ದು, ಅರ್ಜುನ್ ಸೇರಿದಂತೆ ನಾಪತ್ತೆಯಾದವರ ಹುಡುಕಾಟಕ್ಕೆ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂದು ಲಾರಿ ಮಾಲೀಕ ಮುನಾಫ್ ಆರೋಪಿಸಿದ್ದಾರೆ.
ಕೇರಳ ಮೂಲದ ಅರ್ಜುನ್ ದಾಂಡೇಲಿಯಿಂದ ಕೆರಳಕ್ಕೆ ತೆರಳುತ್ತಿದ್ದರು. ಶಿರೂರು ಬಳಿ ಪ್ರತಿ ಬಾರಿಯಂತೆ ನಿಂತಾಗ ಈ ಘಟನೆ ನಡದಿದೆ. ಆದರೆ, ಈವರೆಗೆ ಮಂದಗತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಾರಿಯ ಜಿ.ಪಿ.ಎಸ್ ಲೋಕೇಶನ್ ಹೆದ್ದಾರಿಯ ಮೇಲೆ ತೋರಿಸುತ್ತದೆ. ಆದರೆ, ನಾಲ್ಕು ದಿನಗಳಿಂದ ನಿಧಾನಗತಿಯಲ್ಲಿ ಕಾರ್ಯಾಚರಣೆ ಕೈಗೊಂಡ ಕಾರಣ ನಾಪತ್ತೆಯಾದ ಇನ್ನೂ ಮೂವರ ಹುಡುಕಾಟಕ್ಕೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೇವಲ 4-5 ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಷ್ಟೊಂದು ದೊಡ್ಡ ಗುಡ್ಡ ಕುಸಿತವಾದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಲಾರಿ ಮಾಲೀಕ ಮುನಾಫ್ ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಮಾಧ್ಯಮದವರಿಗೂ ತೆರಳಲು ನಿರ್ಬಂಧ ವಿಧಿಸಿದ್ದನ್ನು ಶಾಸಕ ಸತೀಶ್ ಸೈಲ್ ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಸಮ್ಮುಖದಲ್ಲಿಯೇ ಪೊಲೀಸರು ಬ್ಯಾರಿಕೇಡ್ಗಳನ್ನು ತೆರೆದು ಘಟನಾ ಸ್ಥಳಕ್ಕೆ ಮಾಧ್ಯಮದವರನ್ನು ಕೊಂಡೊಯ್ದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ಪ್ರದೇಶದ ಬಳಿ ತೆರಳಲಾಗಿದೆ. ಆದರೆ, ಇಂದು ಮಾತ್ರ ನಿರ್ಬಂಧ ಮಾಡಲಾಗಿದೆ. ಕೇರಳದಲ್ಲಿ ಇವರ ನಿರ್ಲಕ್ಷ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರಿಂದ ಡಿಸಿ ಇದೀಗ ಈ ರೀತಿ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಸೈಲ್ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಳೆಯ ಆರ್ಭಟ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಈವರೆಗಿನ ಸ್ಥಿತಿಗತಿ ಏನಿದೆ? - KARNATAKA RAIN UPDATE