ಹುಬ್ಬಳ್ಳಿ: ಅಂಜಲಿ ಹತ್ಯೆ ನೋವುಂಟು ಮಾಡಿದೆ. ಇದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಬಂದಿದೆ ಅನ್ನುವುದನ್ನು ತೋರಿಸುತ್ತಿದೆ. ಅಂಜಲಿ ಹತ್ಯೆ ನಂತರ ಆರೋಪಿ ರೈಲಿನಲ್ಲಿ ಮತ್ತೋರ್ವ ಮಹಿಳೆ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಕಿಡಿಕಾರಿದರು.
ಹುಬ್ಬಳ್ಳಿ ವೀರಾಪೂರ ಓಣಿಯ ಅಂಜಲಿ ನಿವಾಸಕ್ಕೆ ಭೇಟಿ ನೀಡಿ, ಅಂಜಲಿ ಅಜ್ಜಿ ಗಂಗಮ್ಮ ಹಾಗೂ ಸಹೋದರಿಯರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದರು. ಅಂಜಲಿ ಕುಟುಂಬ ತೀರಾ ಬಡತನ ಕುಟುಂಬವಾಗಿದೆ. ಸರ್ಕಾರ ಅಂಜಲಿ ಕುಟುಂಬದ ಬೆನ್ನಿಗೆ ನಿಲ್ಲಬೇಕು. ಸರ್ಕಾರ ಆ ಕುಟುಂಬಕ್ಕೆ ಸಹಾಯ ಮಾಡಬೇಕು. ಅವರಿಗೆ ನಿವಾಸ ನೀಡಬೇಕು. ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು. ಸಿಎಂ, ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ಸರ್ಕಾರ ಇದ್ದಾಗ ಲೇಟ್ ನೈಟ್ ಪಾರ್ಟಿಗೆ ಅನುಮತಿ ನೀಡುತ್ತಿರಲಿಲ್ಲ. ಆದರೆ ಈಗ ಲೇಟ್ ನೈಟ್ ಪಾರ್ಟಿಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ಗಾಂಜಾ, ಡ್ರಗ್ಸ್ ಸೇವನೆ ಮಾಡುತ್ತಾರೆ. ಅಂಜಲಿ ಕೊಲೆ ಆರೋಪಿ ಕೂಡ ಗಾಂಜಾ ನಶೆಯಲ್ಲಿದ್ದ ಅಂತಿದ್ದಾರೆ. ಹು-ಧಾದಲ್ಲಿ ಲೇಟ್ ನೈಟ್ ಪಾರ್ಟಿ ಬಂದ್ ಮಾಡಿಸಬೇಕು. ಗಾಂಜಾ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕರು ಡ್ರಗ್ಸ್ ವ್ಯಸನಿಗಳಿಂದ ಬೇಸತ್ತಿದ್ದಾರೆ. ಅಕ್ರಮ ಸಾರಾಯಿ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಪೋಟೋ ಫೋಸ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸ್ಥಳೀಯ ಶಾಸಕರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಅಂಜಲಿ ಕುಟುಂಬಸ್ಥರೇ ಮನೆ ನೀಡಿಲ್ಲ ಅಂತಿದ್ದಾರೆ. ಶಾಸಕರು ನಿವಾಸ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಅಂಜಲಿ ಮನೆಗೆ ಭೇಟಿ ನೀಡಿದ ಲಾಡ್, ಅಬ್ಬಯ್ಯ- 2 ಲಕ್ಷ ಚೆಕ್ ವಿತರಣೆ: ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು - Anjali Murder Case