ಮಂಡ್ಯ: ಕುಮಾರಸ್ವಾಮಿ ಮತ್ತು ದೇವೇಗೌರಿಗೆ ಮಂಡ್ಯ ಜಿಲ್ಲೆಯ ಜನತೆ ಯಾವತ್ತೂ ವಿಷ ಕೊಟ್ಟಿಲ್ಲ, ಸದಾ ಹಾಲು ಕೊಟ್ಟಿದ್ದಾರೆ. ಜಿಲ್ಲೆಯ ಮತದಾರರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ರಾಜಕೀಯವಾಗಿ ಬೆಳೆದಿದ್ದಾರೆ ಎಂದು ಎಂಎಲ್ಸಿ ಮರಿತಿಬ್ಬೇಗೌಡ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜನ ಹಾಲನ್ನಾದ್ರೂ ಕೊಡಿ, ವಿಷನಾದ್ರೂ ಕೊಡಿ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ದೇವೇಗೌಡರು 60 ವರ್ಷ ಸಕ್ರಿಯವಾಗಿ ರಾಜಕೀಯ ಮಾಡಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾದರು. ಆದರೆ ಮಂಡ್ಯದ ಜನತೆ ಸದಾ ನಿಮಗೆ ಹಾಲು ಕೊಟ್ಟರೂ ನೀವು ಜಿಲ್ಲೆಯ ಜನತೆಗೆ ವಿಷ ಕೊಟ್ಟಿದ್ದೀರಿ ಎಂದು ಕಿಡಿಕಾರಿದರು.
ಜಿಲ್ಲೆಯ ಜನತೆಯನ್ನು ಬೆಳಸಲಿಲ್ಲ, ಜಿಲ್ಲೆಯ ಅಭಿವೃದ್ಧಿಗೆ ತಾವು ಚಿಂತನೆ ಮಾಡಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಈ ಜಿಲ್ಲೆಯ ಸಮುದಾಯ ಒಬ್ಬರನ್ನೂ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿಯೂ ಮಾಡಲಿಲ್ಲ ತಾವು. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗ ಸ್ಪರ್ಧೆ ಮಾಡಿದ ಸಂಬಂರ್ಧದಲ್ಲಿ 8 ಸಾವಿರ ಕೋಟಿ ರೂಪಾಯಿಗಳನ್ನು ಈ ಜಿಲ್ಲೆಗೆ ಕೊಡುತ್ತೇನೆ ಎಂದು ಹೇಳಿದ್ದೀರಿ. ಚುನಾವಣೆ ಮುಗಿದ ಬಳಿಕ ಮೂರು ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದೀರಿ, 8 ಸಾವಿರ ಕೋಟಿಯಲ್ಲಿ 8 ರೂಪಾಯಿಯನ್ನು ಮಂಡ್ಯ ಜಿಲ್ಲೆಗೆ ಬಿಡುಗಡೆ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ಜನತೆ ಈ ಬಾರಿ ಬಿಸಿ ಹಾಲು ಕೊಡಬೇಕು: ಈಗ ತಾವೇ ಮಂಡ್ಯ ಅಭ್ಯರ್ಥಿಯಾಗಿ ಅವಕಾಶ ಕೊಟ್ಟರೆ ಕೇಂದ್ರದಲ್ಲಿ ಕೃಷಿ ಸಚಿವನಾಗಿ ಎರಡು ವರ್ಷದಲ್ಲೇ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತಿದ್ದೀರಲ್ಲ, ನಾಚಿಕೆಯಾಗಬೇಕು ನಿಮಗೆ. ಮಂಡ್ಯ ಜನರು ತಣ್ಣಗಿನ ಹಾಲನ್ನೇ ಕೊಟ್ಟಿದ್ದಾರೆ, ನೀವು ಕಣ್ಣು ಮುಚ್ಚಿಕೊಂಡು ಕುಡಿದುಕೊಂಡು ಹೋಗಿದ್ದೀರಿ, ಈ ಬಾರಿಯೂ ನಿಮಗೆ ಜಿಲ್ಲೆ ಜನ ಹಾಲನ್ನೇ ಕೊಡುತ್ತಾರೆ, ಆದರೆ ಕುದಿಯುವ ಬಿಸಿ ಹಾಲು ಕೊಡಬೇಕು ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಅವರೇ ನರೇಂದ್ರ ಮೋದಿ ಜೊತೆ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಪಡೆದಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡವರು ನೀವು. ಬೀಗ ನನ್ನ ಕೈನಲ್ಲಿಲ್ಲ ಕೇಂದ್ರದಲ್ಲಿದೆ ಅಂತೀರಿ ಇವಾಗ ಯಾರ ಕೈ ನಲ್ಲಿದೆ ಎಂದು ಪ್ರಶ್ನಿಸಿದರು.