ಮೈಸೂರು : ನೆಹರು, ಇಂದಿರಾಗಾಂಧಿ ದೇಶದ ಬಡತನ ನಿರ್ಮೂಲನೆ ಮಾಡಿ, ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಅವರಿಗಿಂತ ಮೋದಿಯವರು ಸಾಧನೆ ಮಾಡಿದ್ದಾರೆಯೇ?. ದೇವೇಗೌಡರು ಮೋದಿಯವರನ್ನು ಹೊಗಳುತ್ತಿರುವುದು ವಿಪರ್ಯಾಸ. ಇದನ್ನು ನಾನು ನಿರೀಕ್ಷೆ ಸಹ ಮಾಡಿರಲಿಲ್ಲ ಎಂದು ಎಂಎಲ್ಸಿ ಹೆಚ್ ವಿಶ್ವನಾಥ್ ಅವರು ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸಂಭ್ರಮ 50ರ ಸವಿನೆನಪಿಗಾಗಿ ಶ್ರೀ ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನೆಗೆ ಶಂಕು ಸ್ಥಾಪನೆಯ ಕಾರ್ಯಕ್ರಮ ನೆರವೇರಿಸಿದ ನಂತರ ಎಂಎಲ್ಸಿ ಹೆಚ್ ವಿಶ್ವನಾಥ್, ಶಾಸಕ ತನ್ವೀರ್ ಸೇಠ್ ಹಾಗೂ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗಡೆ ಮಾಧ್ಯಮಗಳ ಜೊತೆ ಮಾತನಾಡಿದರು.
ಮೋದಿಯವರನ್ನು ದೇವೇಗೌಡರು ಹೊಗಳುತ್ತಿರುವುದು ವಿಪರ್ಯಾಸ. ದೇವೇಗೌಡರಂತಹ ಹಿರಿಯ ನಾಯಕರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಜಾತ್ಯತೀತ ಪದಕ್ಕೆ ಈ ಮೂಲಕ ತಿಲಾಂಜಲಿ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ದಾಹ ಇರುವವರು ಪಕ್ಷ ತೊರೆಯುತ್ತಾರೆ : ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗ ಕಾಂಗ್ರೆಸ್ನ ಕೆಲ ಹಿರಿಯ ನಾಯಕರು ಬಿಜೆಪಿ ಸೇರುತ್ತಿರುವ ವಿಚಾರವಾಗಿ ಶಾಸಕ ತನ್ವಿರ್ ಸೇಠ್ ಪ್ರತಿಕ್ರಿಯೆ ನೀಡಿ, ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ಅಧಿಕಾರದ ದಾಹ ಇರುವವರು ಪಕ್ಷ ತೊರೆಯುತ್ತಾರೆ. ಇದರಿಂದ ಪಕ್ಷಕ್ಕೆ ನಷ್ಟ ಏನಿಲ್ಲ. ಬದ್ಧತೆ, ತತ್ವ ಸಿದ್ಧಾಂತಗಳ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಬದ್ಧತೆ ಇಲ್ಲದೇ ಇರುವವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ನರೇಂದ್ರ ಮೋದಿ ಹೇಳ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಫಲಿತಾಂಶ ಹೊರ ಬೀಳಲಿದೆ. ಜನತೆ ಸ್ವಚ್ಛ, ಪಾರದರ್ಶಕ ಆಡಳಿತ ಬಯಸಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ಬಿಜೆಪಿ-ಜೆಡಿಎಸ್ ರಾಜಕೀಯ ತಂತ್ರಗಾರಿಕೆ ಫಲಿಸುವುದಿಲ್ಲ: ರಾಜ್ಯಸಭಾ ಚುನಾವಣೆಗೆ ಜೆಡಿಎಸ್ನಿಂದ 5ನೇ ಅಭ್ಯರ್ಥಿ ಕಣಕ್ಕಿಳಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸೇಠ್, ಜೆಡಿಎಸ್ಗೆ ನಿಗದಿತ ಪ್ರಮಾಣದ ಮತಗಳು ಇಲ್ಲ. ಗೆಲ್ಲುವ ಸಾಮರ್ಥ್ಯ ಇಲ್ಲದಿದ್ದರೂ 5ನೇ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಕುದುರೆ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್ಗೆ 135 ಮತ್ತು ಮೂವರು ಪಕ್ಷೇತರರು ಸೇರಿದಂತೆ 138 ಶಾಸಕರ ಬೆಂಬಲವಿದೆ ಎಂದು ತಿಳಿಸಿದರು.
ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸುತ್ತಾರೆ. ಜೆಡಿಎಸ್-ಬಿಜೆಪಿ ರಾಜಕೀಯ ತಂತ್ರಗಾರಿಕೆ ಫಲಿಸುವುದಿಲ್ಲ. ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಅನ್ಯ ಪಕ್ಷಗಳಿಗೆ ಸೆಳೆಯುವುದನ್ನು ತಪ್ಪಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಒಬ್ಬ ಶಾಸಕ ಒಮ್ಮೆ ಪಕ್ಷಾಂತರ ಮಾಡಿದರೆ ಮುಂದಿನ 6 ವರ್ಷ ಕಾಲ ಚುನಾವಣೆಗೆ ನಿಲ್ಲದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಬಾರಿಯೂ ನಾನು ಟಿಕೆಟ್ ಆಕಾಂಕ್ಷಿ : ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ, ರಾಜಕೀಯದಲ್ಲಿ ದೇವರಾಜ ಅರಸು ಅವರ ಕುಟುಂಬದ ನಿರ್ಲಕ್ಷ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ದೇವರಾಜ ಅರಸು ಮೊಮ್ಮಗ ಸೂರಜ್ ಹೆಗಡೆ, ನಾನು ಸಹ ಪಾರ್ಟಿಯಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದೇನೆ.
ಕಳೆದ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಬಾರಿಯೂ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಬಿಜೆಪಿ ಎಂದರೆ ಗೊಂದಲ ಸೃಷ್ಟಿಸುವವರು: ಎಂಎಲ್ಸಿ ಹೆಚ್. ವಿಶ್ವನಾಥ್