ಹುಬ್ಬಳ್ಳಿ: ಸಿ ಪಿ ಯೋಗೇಶ್ವರ್ ಅವರು ಇಂದು ತಮ್ಮ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗೀಶ್ವರ್ ಅವರು, ದೇಶಾಪಾಂಡೆ ನಗರದ ಪಿಂಟೋ ರಸ್ತೆಯಲ್ಲಿರುವ ಸಭಾಪತಿ ಬಸವರಾಜ್ ಹೊರಟ್ಟಿ ಮನೆಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿದರು.
ಯೋಗೇಶ್ವರ್ ರಾಜೀನಾಮೆ ಅಂಗೀಕಾರ: ರಾಜೀನಾಮೆ ಪತ್ರ ಸ್ವೀಕರಿಸಿ ಮಾತನಾಡಿದ ಸಭಾಪತಿಗಳು, ಸಿ ಪಿ ಯೋಗೇಶ್ವರ್ ಅವರು ಸ್ವ-ಇಚ್ಛೆಯಿಂದ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕಾರ ಮಾಡಿದ್ದೇನೆ ಎಂದು ತಿಳಿಸಿದರು.
ಬಳಿಕ ಯೋಗೇಶ್ವರ್ ಮಾತನಾಡಿ, ಸ್ವ-ಇಚ್ಛೆಯಿಂದ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿರುವೆ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಈಗ ಕೇಂದ್ರ ಸಚಿವರಾಗಿದ್ದು, ಆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ನಾನು ಜನಗಳ ಮಧ್ಯೆ ಇರುವ ಆಸೆ ಹೊಂದಿದ್ದೇನೆ. ಹೀಗಾಗಿ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಎಂದರು.
ಹೆಚ್ಡಿಕೆ ಅವಕಾಶ ಮಾಡಿಕೊಡಲಿ - ಸಿಪಿವೈ; ಕಾಂಗ್ರೆಸ್ ಪಕ್ಷದವರ ಸಂಪರ್ಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರೂ ಸಹ ಸಂಪರ್ಕ ಮಾಡಿಲ್ಲ. ಒಂದು ಅವಕಾಶ ಮಾಡಿಕೊಡುವೆಂತೆ ಬಿಜೆಪಿ ವರಿಷ್ಠರಿಗೆ ಇವತ್ತು ಮನವಿ ಮಾಡುತ್ತೇನೆ. ಉಪಚುನಾವಣೆಯಲ್ಲಿ ಜನರು ಗೆದ್ದೇ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆಗೆ ಅವಕಾಶ ಮಾಡಿಕೊಡಲಿ. ವರಿಷ್ಠರು ಕೊನೆ ಗಳಿಗೆಯಲ್ಲಾದರೂ ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಟಿಕೆಟ್ ವಿಚಾರದಲ್ಲಿ ಪಕ್ಷದ ಎಲ್ಲ ನಾಯಕರು ನಮ್ಮ ಪರವಾಗಿ ಧ್ವನಿ ಎತ್ತಿದ್ದಾರೆ. ನನಗೆ ಟಿಕೆಟ್ ನೀಡಬೇಕೆಂದು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈವರೆಗೆ ನನಗೆ ಸ್ಪಂದನೆ ಸಿಕ್ಕಿಲ್ಲ. ಇನ್ನೂ ಕಾಲಾವಕಾಶ ಇದೆ, ಕಾದು ನೋಡೋಣ ಎಂದರು.
ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ನನಗೆ ಬಿಜೆಪಿಯಲ್ಲಿರಬೇಕು, ಎನ್ಡಿಎ ಅಭ್ಯರ್ಥಿಯಾಗಬೇಕೆಂಬ ಆಸೆಯಿದೆ. ಅನುಭವ ನೋಡಿ ಪಕ್ಷ ಟಿಕೆಟ್ ನೀಡಬೇಕು. ಇಲ್ಲದೇ ಹೋದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದೇನೆ. ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಯೋಚನೆ ಇಲ್ಲ. ಅವರು ಕೂಡ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾಳೆ ಏನಾಗುತ್ತೋ ನೋಡೋಣ ಎಂದರು.