ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ ಆತ್ಮಹತ್ಯೆಗೆ ಭಾಗ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯ ಸರ್ಕಾರವನ್ನು ಟೀಕಿಸಿದರು.
ವಿಧಾನ ಪರಿಷತ್ನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ ಸಂಬಂಧ ನಿಯಮ 68ರಡಿ ಚರ್ಚೆ ಮುಂದುವರೆಸಿದ ವೇಳೆ ಮಾತನಾಡಿದ ಅವರು, ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ 94 ಕೋಟಿ ರೂಪಾಯಿ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ವಾಲ್ಮೀಕಿ ನಿಗಮದ ಲೂಟಿಗೆ ಪ್ರಿಪ್ಲಾನ್ ಮಾಡಿಕೊಂಡಿದ್ದರು. ಒಂದು ವೇಳೆ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆಗೆ ಮಾಡಿಕೊಳ್ಳದಿದ್ದರೆ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಅವರ ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್ ವಿವರಗಳನ್ನ ಉಲ್ಲೇಖಿಸಿ ಈ ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ ಆತ್ಮಹತ್ಯೆಗೆ ಭಾಗ್ಯ ಎಂದು ಕುಟುಕಿದರು.
ಹಗರಣವನ್ನ ವ್ಯವಸ್ಥಿತವಾಗಿ ಮಾಡಲು ಕಳೆದ ಡಿಸೆಂಬರ್ನಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ನೇತೃತ್ವದಲ್ಲಿ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ್ದರು. ವಿವಿಧ ಸರ್ಕಾರಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ತಲುಪಿಸಲು ಕೇಂದ್ರ ಸರ್ಕಾರ ಜಾರಿ ತಂದಿದ್ದ ಡಿಬಿಟಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ಹೋಗಲಿದೆ. ಆದರೆ ಇಲ್ಲಿ ನೇರವಾಗಿ ನಕಲಿ ಖಾತೆಗೆ ಹಣ ಹೋಗಿದೆ ಬಾರ್, ಚಿನ್ನದ ಅಂಗಡಿಗಳಿಗೆ ಹಣ ವರ್ಗಾವಣೆಯಾಗಿದೆ. ಆರೋಪಿಗಳಾದ ಸತ್ಯನಾರಾಯಣ ವರ್ಮ ಹಾಗೂ ಚಂದ್ರಮೋಹನ್ ಎನ್ನುವವರು ಹಣ ವರ್ಗಾವಣೆ ರೂವಾರಿಗಳು ಎಂದರು.
ತೆಲಂಗಾಣ, ಕರ್ನಾಟಕ ಚುನಾವಣೆಗೆ, ಲ್ಯಾಂಬರ್ಗಿನಿ ಕಾರು, ಜಮೀನು ಸೇರಿದಂತೆ ಹಲವು ಖರೀದಿಗೆ ಹಣ ಬಳಕೆಯಾಗಿದೆ. ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಬಳಕೆ ಆಗಬೇಕಿದ್ದ ಹಣವನ್ನ ಅಧಿಕಾರಿಗಳು, ಸಚಿವರು ಎಲ್ಲರೂ ದುರುಪಯೋಗಪಡಿಸಿಕೊಂಡಿದ್ದಾರೆ. ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ, ಯಾರದ್ದೋ ದುಡ್ಡು ಎಂದರೆ ಬೇನಾಮಿ ಹಣ ಅಲ್ಲ, ಸರ್ಕಾರದ ಹಣವಾಗಿದೆ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡು ಒಂದೂವರೆ ತಿಂಗಳಾಗಿದೆ. ಇದುವರೆಗೆ ಪರಿಹಾರ, ಪಿಂಚಣಿ ಪಿಎಫ್ ಏನೂ ಸಿಕ್ಕಿಲ್ಲ. ಅವರ ಕುಟುಂಬ ಬೀದಿಗೆ ಬಿದ್ದಿದೆ. ಸಚಿವರ ಮೌಖಿಕ ಆದೇಶದ ಮೇರೆಗೆ ಯುನಿಯನ್ ಬ್ಯಾಂಕ್ ಅಕೌಂಟ್ನ ವಸಂತನಗರದಿಂದ ಎಂಜಿ ರಸ್ತೆ ಬ್ರಾಂಚ್ಗೆ ವರ್ಗಾಯಿಸಲಾಗಿದೆ. 187.33 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಪಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಕ್ರಮ ಹಣ ವರ್ಗಾವಣೆ ಹಿಂದೆ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಮಾಜಿ ಸಚಿವ, ಶಾಸಕನಿಗೆ ಎಸ್ಐಟಿ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಹೀಗಾಗಿ ತನಿಖೆ ಪೂರ್ಣ ಆಗುವ ಮುನ್ನವೇ ನಿರ್ಧಾರಕ್ಕೆ ಬರಬೇಡಿ ಎಂದು ಸಿ.ಟಿ.ರವಿಗೆ ಸೂಚಿಸಿದರು.
ಸದನದಲ್ಲಿ ಪೋಸ್ಟರ್ ವಾರ್: ವಾಲ್ಮೀಕಿ ಅಭಿವೃದ್ಧಿ ಹಗರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್ ಕಾಂಗ್ರೆಸ್ ನಾಯಕರ ಜೊತೆ ಗುರುತಿಸಿಕೊಂಡಿದ್ದು ಈ ಸಂಬಂಧ ಸಿ.ಟಿ.ರವಿ. ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಈತ ಬಿಜೆಪಿ ಕಾರ್ಯಕರ್ತನಾಗಿದ್ದು, ಶ್ರೀರಾಮಲು ಜೊತೆ ಸೇರಿದಂತೆ ಇನ್ನಿತರ ನಾಯಕರ ಜೊತೆ ಇರುವ ಪೋಸ್ಟರ್ ಪ್ರದರ್ಶಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಪೋಸ್ಟರ್ ವಾರ್ ಕೂಡ ನಡೆಯಿತು. ನೆಕ್ಕುಂಟಿ ನಾಗರಾಜ್ ಬಿಜೆಪಿ ಕಾರ್ಯಕರ್ತನಾಗಿದ್ದು ಹಗರಣದಲ್ಲಿ ಭಾಗಿಯಾಗಿರುವುದು ಅಸಹ್ಯಕರ ಎಂದು ಸಚಿನ ಶಿವರಾಜ್ ತಂಗಡಗಿ ಆಕ್ಷೇಪಿಸಿದರು.
ಆಡಳಿತ-ವಿಪಕ್ಷ ಸದಸ್ಯರ ಪೋಸ್ಟರ್ ವಾರ್ ನಿಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿಕೊಂಡರೂ ಪೊಸ್ಟರ್ ಗದ್ದಲ ಮುಂದುವರೆಸಿದ್ದರಿಂದ ಗುರುವಾರಕ್ಕೆ ಸದನವನ್ನ ಸಭಾಪತಿಗಳು ಮುಂದೂಡಿದರು.
ಇದನ್ನೂ ಓದಿ: ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಪುನರಾರಂಭಕ್ಕೆ ಕ್ರಮ: ಸಚಿವ ಎಂ.ಬಿ. ಪಾಟೀಲ್ - MPM Factory