ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರಿಗೆ ವಯಸ್ಸಿನ ಸಮಸ್ಯೆ, ಹಾಗಾಗಿ ಏನೇನೊ ಮಾತನಾಡುತ್ತಾರೆ. ಅವರ ಮಾತಿನ ಮೇಲೆ ಅವರಿಗೆ ಗಮನ ಇರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರೂ ಆದ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಎಚ್ ವಿಶ್ವನಾಥ್ ಅವರ ಹೇಳಿಕೆಗೆ, ನ್ಯಾಯಾಲಯದ ಆವರಣದಲ್ಲಿ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ಅವಿರೋಧವಾಗಿ ಹೇಗೆ ಆಯ್ಕೆ ಮಾಡುವುದಕ್ಕೆ ಆಗುತ್ತೆ? ಈಗಾಗಲೇ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಂ.ಲಕ್ಷ್ಮಣ್ ಅವರು ಉಮೇದುವಾರಿಕೆ ವಾಪಸ್ ಪಡೆದರೆ ಅವಿರೋಧವಾಗಿ ಆಯ್ಕೆ ಮಾಡಿದಂಗೆ ಆಗುತ್ತಾ ? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನ್ನುವುದು ಒಂದು ಪ್ರಕ್ರಿಯೆ, ಅದು ನಡೆಯಲೇಬೇಕು. ಜನರಿಂದ ಪ್ರತಿನಿಧಿಗಳು ಆಯ್ಕೆಯಾಗಬೇಕು. ವಿಶ್ವನಾಥ್ ಅವರು ಆಲ್ ಇಂಡಿಯಾ ಟೂರ್ ಹೊಡೆದು ಬಂದರೂ, ಇನ್ನೂ ಅವರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ ಎಂದು ಟೀಕಿಸಿದರು.
ವಿಶ್ವನಾಥ್ ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದು ಸ್ಪಷ್ಟಪಡಿಸಲಿ, ಅವರ ಹೇಳಿಕೆಯಿಂದ ನಮಗೆ ಏನೂ ಹಿನ್ನೆಡೆ ಆಗಲ್ಲ, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವಿನ ವಾತಾವರಣ ಇದೆ ಎಂದರು.