ಬೆಂಗಳೂರು: ಡಾ.ಶಿವರಾಮ ಕಾರಂತ ಲೇಔಟ್ನಲ್ಲಿ (DSKL) ನಿವೇಶನಗಳ ಹಂಚಿಕೆಗಾಗಿ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಜ್ಜಾಗುತ್ತಿದೆ ಎಂಬ ವಿಷಯ ತಿಳಿದಿದ್ದು, ಈ ಸಂದರ್ಭದಲ್ಲಿ ನಾನು ಒಂದು ಜ್ವಲಂತ ವಿಷಯದ ಬಗ್ಗೆ ತಮ್ಮ ಗಮನವನ್ನು ಸೆಳೆಯಲು ಇಚ್ಛಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಬನಶಂಕರಿ 6ನೇ ಹಂತ ಬಡಾವಣೆ, ಬಿಡಿಎ ಅರಣ್ಯ ಪ್ರದೇಶದಲ್ಲಿ (ತುರಹಳ್ಳಿ ಅರಣ್ಯ ಪ್ರದೇಶ) ಮತ್ತು ಅರಣ್ಯ ಬಫರ್ ವಲಯದಲ್ಲಿ 2003-2004ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರ ಫಲವಾಗಿ, ಇಂದು 1500ಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ತಮ್ಮ ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. 20 ವರ್ಷ ಕಳೆದುಹೋಗಿದ್ದರೂ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ (ಬಿಡಿಎ) ಹಾಗೂ ಅರಣ್ಯ ಇಲಾಖೆಗಳು ಒಟ್ಟಿಗೆ ಕುಳಿತು, ಚರ್ಚಿಸಿ ಪ್ರಸ್ತುತ ಭೂಮಿಯ ಮಾಲೀಕತ್ವದ ಬಗ್ಗೆ ಒಂದು ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ಇರುವುದು ನಿಜಕ್ಕೂ ವಿಷಾದನೀಯ ಎಂದು ಹೇಳಿದ್ದಾರೆ.
ಬಿಡಿಎ ಉದಾಸೀನ, ಬೇಜವಾಬ್ದಾರಿ ಮನಸ್ಥಿತಿಯಿಂದಾಗಿ, ನಿವೇಶನ ಪಡೆದು 20 ವರ್ಷಗಳಾದರೂ ತಮ್ಮ ನಿವೇಶನದಲ್ಲಿ ಒಂದು ಗೂಡು ಕಟ್ಟಿಕೊಳ್ಳುವ ಸಂತ್ರಸ್ತ ಹಂಚಿಕೆದಾರರ ಆಸೆಗೆ ತಣ್ಣೀರು ಎರಚಿದಂತಾಗಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಹಾಗೆಯೇ, ಸ್ವಾಧೀನತೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ದಾವೆಗಳು ಬಾಕಿ ಇರುವುದರಿಂದ ಬನಶಂಕರಿ 6ನೇ ಹಂತ, ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಹಾಗೂ ಅಂಜನಾಪುರದಂತಹ ಕೆಲವು ಬಿಡಿಎ ನಿರ್ಮಿತ ಬಡಾವಣೆಗಳಲ್ಲಿನ ಸುಮಾರು 5 ಸಾವಿರಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ಜಮೀನಿನ ನೈಜ ಸ್ವಾಧೀನದಲ್ಲಿಲ್ಲದ ಕಾರಣ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅವರ ಪರಿಸ್ಥಿತಿ, ಸಂಕಟ ಹೇಳತೀರದು ಎಂದಿದ್ದಾರೆ.
ಕುಂದುಕೊರತೆ ಆದ್ಯತೆ ಮೇರೆಗೆ ಪರಿಗಣಿಸಿ: ಅಲ್ಲದೆ, ಇಲ್ಲಿನ ಕೆಲವು ಲೇಔಟ್ಗಳಲ್ಲಿ ಭೂ ಸ್ವಾಧೀನಕ್ಕೆ ಒಳಪಟ್ಟ ಅನೇಕ ಜಮೀನುಗಳ ಮಾಲೀಕರು ತಮ್ಮ ಭೂಮಿಗೆ ಬದಲಾಗಿ ಪರಿಹಾರದ ರೂಪದಲ್ಲಿ ಬಿಡಿಎ ನೀಡುವ ನಿವೇಶನಗಳ ಪರಿಹಾರದ ಮಂಜೂರಾತಿಗಾಗಿ ಅನೇಕ ಸಮಯದಿಂದ ಎದುರು ನೋಡುತ್ತಿದ್ದಾರೆ. ಬನಶಂಕರಿ 6ನೇ ಹಂತ, ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಮತ್ತು ಅಂಜನಾಪುರದಂತಹ ಬಡಾವಣೆಗಳಲ್ಲಿ ನಿವೇಶನ ಹಂಚಿಕೆಯಾಗಿದೆ. ಬಳಿಕ, ಬಿಡಿಎಗೆ ಹಣ ಪಾವತಿ ಮಾಡಿ ನಿವೇಶನ ನೋಂದಣಿ ಮಾಡಿಕೊಂಡಿದ್ದಾರೆ. ಆದರೂ ಕೂಡ ನಾನಾ ಕಾರಣಗಳಿಂದ ನಿವೇಶನ ಸ್ವಾಧೀನಕ್ಕೆ ಸಿಗಲು ಸಾಧ್ಯವಾಗಿಲ್ಲ. ಇಂತಹ ಅರ್ಜಿದಾರರ ಮತ್ತು ಭೂ ಮಾಲೀಕರ ಪರಿಪಾಟಲುಗಳನ್ನು ಗಮನದಲ್ಲಿರಿಸಿಕೊಂಡು, ಇವರ ಕುಂದುಕೊರತೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು. ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಲಭ್ಯವಿರುವ ನಿವೇಶನಗಳನ್ನು ಸಾರ್ವಜನಿಕರಿಂದ ಹಂಚಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸುವ ಮುನ್ನ, ಮೊದಲಿಗೆ ಈ ಸಂತ್ರಸ್ತರಿಗೆ ಪರ್ಯಾಯ ನಿವೇಶನ ನೀಡಬೇಕಾಗಿರುವುದು ಸಮಂಜಸ ಎಂದು ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಭೂಬಾಧಿತ ನಿವೇಶನ ಹಂಚಿಕೆದಾರದಿಂದ ಅರ್ಜಿ ಆಹ್ವಾನಿಸಿ: ಇವರಿಗೆ ಮೊದಲಿಗೆ ನ್ಯಾಯಯುತವಾಗಿ ನಿವೇಶನ ಒದಗಿಸಬೇಕೆಂಬುದು ನನ್ನ ಆಗ್ರಹಪೂರ್ವಕ ಬೇಡಿಕೆ ಕೂಡ ಆಗಿದೆ. ಬಿಡಿಎ ಪರ್ಯಾಯ ನಿವೇಶನಗಳನ್ನು ಒದಗಿಸುವ ಮೊದಲು ಈ ಎಲ್ಲಾ ಭೂಬಾಧಿತ ನಿವೇಶನ ಹಂಚಿಕೆದಾರದಿಂದ ಅರ್ಜಿಗಳನ್ನು ಆಹ್ವಾನಿಸಿ, ಇದಕ್ಕಾಗಿ ವ್ಯಾಪಕ ಪ್ರಚಾರವನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಇದರಿಂದ ಬಿಡಿಎಗೆ ಹಂಚಿಕೆದಾರರ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ. ಜೊತೆಗೆ ಹಂಚಿಕೆದಾರರಿಂದ ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡುವುದನ್ನು ಪೂರ್ಣವಾಗಿ ನಿಲ್ಲಿಸಬಹುದು ಮತ್ತು ಈಗಾಗಲೇ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದು ಎಂದು ಒತ್ತಾಯಿಸಿದ್ದಾರೆ.
ಹಂಚಿಕೆದಾರರ ಶಾಪದಿಂದಲೂ ಬಿಡಿಎ ವಿಮುಕ್ತಿಗೊಳ್ಳಬಹುದು. ಆದ್ದರಿಂದ ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಿ ಪರಿಹಾರ ನೀಡುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಶಾಸಕ ಎಸ್.ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.