ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಆರೋಪ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು 4 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ. ಮೇ 8ರ ವರೆಗೆ ರೇವಣ್ಣ ಅವರು ಎಸ್ಐಟಿ ಕಸ್ಟಡಿಯಲ್ಲಿರಲಿದ್ದಾರೆ.
ಪ್ರಕರಣದಲ್ಲಿ ರೇವಣ್ಣ ಅವರ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ 5 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ಎಸ್ಐಟಿ ಕಸ್ಟಡಿಗೆ ನೀಡದಂತೆ ರೇವಣ್ಣ ಅವರ ಪರ ವಕೀಲ ಮೂರ್ತಿ ಡಿ. ನಾಯ್ಕ್ ವಾದ ಮಂಡಿಸಿದರು.
ಮೈಸೂರಿನ ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಶನಿವಾರ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹಾಗೂ ತಮ್ಮ ತಂದೆ ಹೆಚ್. ಡಿ. ದೇವೇಗೌಡ ಅವರ ನಿವಾಸದಲ್ಲಿದ್ದ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ಬಳಿಕ ಸಿಐಡಿಯಲ್ಲಿರುವ ಎಸ್ಐಟಿ ಕಚೇರಿಯಲ್ಲಿ ರೇವಣ್ಣ ಅವರನ್ನು ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಭಾನುವಾರ ಅವರನ್ನು ಕೋರಮಂಗಲದ ಎನ್. ಜಿ. ವಿಯಲ್ಲಿರುವ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟೀಮನಿ ಅವರ ನಿವಾಸದ ಮುಂದೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಇದೊಂದು ರಾಜಕೀಯ ಷಡ್ಯಂತ್ರ, ಸೂಕ್ತ ಪುರಾವೆಯಿಲ್ಲದೆ ಆರೋಪ ಹೊರಿಸಲಾಗಿದೆ; ಮಾಜಿ ಸಚಿವ ಹೆಚ್ ಡಿ ರೇವಣ್ಣ - ABDUCTION CASE