ಉಡುಪಿ : ಸೋಮೇಶ್ವರದ ಬಳಿ ಗುಡ್ಡ ಕುಸಿದರೆ ಅಧಿಕಾರಿಗಳೇ ಹೊಣೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೈಂದೂರಿನ ಪಡುವರಿಯ ಸೋಮೇಶ್ವರ ಬೀಚ್ಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದ್ದಾರೆ. ತಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು ಎಂದು ಶಾಸಕರು ಸೂಚಿಸಿದ್ದಾರೆ.
ಕೊಂಚ ವಿರಾಮ ನೀಡಿದ ವರುಣ: ಉಡುಪಿ-ಕುಂದಾಪುರ-ಬೈಂದೂರು ಭಾಗಗಳಲ್ಲಿ ಬುಧವಾರ ಮಳೆ ಕೊಂಚ ವಿರಾಮ ನೀಡಿದೆ. ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದ ನದಿಗಳು ಮಂದಗತಿಯಲ್ಲಿ ಹರಿಯಲಾರಂಭಿಸಿವೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲೂ ವಾತಾವರಣ ತಿಳಿಯಾಗಿತ್ತು. ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಬ್ರಹ್ಮಾವರ ತಾಲೂಕಿನ ಚಾಂತರು ಗ್ರಾಮದಲ್ಲಿ ಹರಿಯುವ ಸೀತಾ ನದಿಯ ಹರಿವಿನ ವೇಗ ತಗ್ಗಿದೆ.
ದಿಮ್ಮಿಗಳ ತೆರವು: ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಭಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿದ್ದವು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳು ಕೈಜೋಡಿಸಿದರು.
ನದಿ ಉಕ್ಕಿ ಹರಿಯುತ್ತಿರುವ ಪಾಪನಾಶಿನಿ: ಮಳೆ ಕಡಿಮೆಯಾಗಿದ್ದರೂ ಸಹ ಕಾಪು ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕುರ್ಕಾಲು ಪರಿಸರದಲ್ಲಿ ಹಾದುಹೋಗುವ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದೆ. ಕುರ್ಕಾಲು ಕಿಂಡಿ ಅಣೆಕಟ್ಟು ಬಳಿ ನದಿ ರಭಸದಿಂದ ಹರಿಯುತ್ತಿದ್ದು, ಅಣೆಕಟ್ಟೆಗೆ ಮರಳುಗಾರಿಕೆಗೆ ಬಳಕೆಯಾಗುತ್ತಿದ್ದ ದೋಣಿಯೊಂದು ಸಿಲುಕಿಕೊಂಡಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಆತಂಕ ಶುರುವಾಗಿದೆ. ಮಳೆ ಮುಂದುವರಿದರೆ ಪಾಪನಾಶಿನಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಬರುವ ಸಾಧ್ಯತೆ ಇದೆ. ಫಲವತ್ತಾದ ಕೃಷಿ ಭೂಮಿ ಕೂಡ ಮುಳುಗಡೆಯಾಗುವ ಭೀತಿ ಉಂಟಾಗಿದೆ.
ನೆರೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆ : ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಭಾರಿ ವರ್ಷಧಾರೆ ಆಗಿದ್ದು, ಗದ್ದೆ, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಈ ಪ್ರದೇಶಗಳ ದೃಶ್ಯಾವಳಿ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ ಸೌಪರ್ಣಿಕಾ, ಶಾಂಭವಿ, ಚಕ್ರ, ಪಂಚಗಂಗಾವಳಿ, ಎಡಮಾವಿನಹೊಳೆ ಹಾಗೂ ಕುಜ್ಜ ನದಿ ಉಕ್ಕಿ ಹರಿದಿದ್ದು, ನದಿ ಪ್ರದೇಶದಲ್ಲಿ ನೆರೆ ಸೃಷ್ಟಿಯಾಗಿದೆ. ಕಾಲುಸಂಕಗಳಲ್ಲಿ ನೀರು ಮೇಲೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಅನೇಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ : ಉಡುಪಿ: ಕಾಲುಸಂಕ ಇಲ್ಲದೆ ಗ್ರಾಮಸ್ಥರ ಪರದಾಟ, ಶಾಶ್ವತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಶಾಸಕ - villagers facing problem