ಬೆಂಗಳೂರು: "ನನ್ನನ್ನು ಜೆಡಿಎಸ್ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಆದ್ದರಿಂದ ಚುನಾವಣಾ ಪ್ರಚಾರಕ್ಕೆ ಹೋಗಿಲ್ಲ" ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಪ್ರಚಾರದಲ್ಲಿ ಗೈರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ನನಗೆ ಜವಾಬ್ದಾರಿ ಕೊಟ್ಟಿದ್ದಾರಾ?. 40 ಜನ ಪ್ರಚಾರಕರ ಪಟ್ಟಿ ತಯಾರು ಮಾಡಿದ್ದಾರೆ. ಆದರೆ, ಕೋರ್ ಕಮಿಟಿ ಅಧ್ಯಕ್ಷರ ಹೆಸರನ್ನು ತೆಗೆದು ಹಾಕಿದ್ದಾರೆ. ಒಂದು ವೇಳೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಹೆಸರು ಇದ್ದಿದ್ದರೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ" ಎಂದರು.
"ಚಾಮುಂಡಿ ಬೆಟ್ಟದ ಕಾರ್ಯಕ್ರಮದಲ್ಲಿ ನಾನು ಯಾರ ಪರವಾಗಿ ಮಾತನಾಡಿಲ್ಲ. ಸಿಎಂ ರಾಜೀನಾಮೆಗೆ ಬಿಜೆಪಿ - ಜೆಡಿಎಸ್ ದಿನಾ ಒತ್ತಾಯಿಸುತ್ತಿದ್ದರು. ಇತ್ತ ಹೆಚ್ಡಿಕೆ ರಾಜೀನಾಮೆಗೆ ಕಾಂಗ್ರೆಸ್ ಸಚಿವರು ಒತ್ತಾಯಿಸುತ್ತಿದ್ದರು. ಎಫ್ಐಆರ್ ಎಲ್ಲರ ಮೇಲಿದೆ. ಎಫ್ಐಆರ್ ಆಧಾರದಲ್ಲಿ ರಾಜೀನಾಮೆ ಕೊಡಬೇಕಾದರೆ ಎಲ್ಲರೂ ರಾಜೀನಾಮೆ ಕೊಡಬೇಕಾಗುತ್ತದೆ ಎಂದಷ್ಟೇ ಹೇಳಿದ್ದೇನೆ ಅಷ್ಟೇ" ಎಂದು ಸ್ಪಷ್ಟಪಡಿಸಿದರು.
"ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಸಭೆಯನ್ನು ನಾನು ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ನಿಗದಿ ಪಡಿಸಲಾಗಿತ್ತು. ಅವತ್ತೇ ನನ್ನನ್ನು ಬಿಟ್ಟಿದ್ದಾರೆ. ಜೆಡಿಎಸ್‌ನಲ್ಲಿ ನನ್ನ ಮನಸು ಒಡೆದಿಲ್ಲ. ನಾನು ಹೇಗೆ ಇದ್ದೇನೋ ಹಾಗೆಯೇ ಇದ್ದೇನೆ. ನಾನು ಇಲ್ಲದಿದ್ದನ್ನು ನೋಡಿಯೇ ಕೋರ್ ಕಮಿಟಿ ಸಭೆ ಕರೆದಿದ್ದಾರೆ, ನಾನು ಏನು ಮಾಡೋದು? ನನ್ನನ್ನು ಪಕ್ಷದಿಂದ ದೂರ ಇಡಬೇಕು ಎಂಬ ಉದ್ದೇಶ ಅವರಿಗೆದೆಯೋ, ಇಲ್ಲವೋ ಎಂಬುದನ್ನು ಅವರೇ ಹೇಳಬೇಕು" ಎಂದರು.
"ನನಗೆ ಕೆಲಸ ವರ್ಷದ 365 ದಿನವೂ ಇದೆ. ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ರಾಜ್ಯ ಸುತ್ತಿದಾಗ ಕೆಲಸ ಇರಲಿಲ್ಲವೇ. ತಾವು ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷರಾಗಿ ರಾಜ್ಯ ಪ್ರವಾಸ ಕೈಗೊಂಡಾಗ ಟಿವಿ, ಪತ್ರಿಕೆಗಳಲ್ಲಿ ನನ್ನ ಹೆಸರು ದೊಡ್ಡದಾಗಿ ಪ್ರಕಟವಾಗುತ್ತಿದ್ದಂತೆಯೇ ನನ್ನ ಮೇಲೆ ಟಾರ್ಗೆಟ್ ಆರಂಭವಾಗಿತ್ತು" ಎಂದು ಹೇಳಿದರು.
"ಜೆಡಿಎಸ್ ತೊರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿಲ್ಲ" ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹೆಚ್‌ಡಿಕೆಗೆ 'ಕರಿಯಣ್ಣ' ಎಂದು ಸಂಬೋಧನೆ: ಕ್ಷಮೆಯಾಚಿಸಿದ ಸಚಿವ ಜಮೀರ್ ಅಹ್ಮದ್