ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ ಮಂಡಿಸಿದ್ದು, ಗಡಿಜಿಲ್ಲೆ ಚಾಮರಾಜನಗರದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಜಿಲ್ಲೆಗೆ ಅಲ್ಪ ಅನುದಾನವಷ್ಟೇ ಸಿಕ್ಕಿದ್ದು, ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಯಳಂದೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಬಜೆಟ್‌ನಲ್ಲಿ ಈಡೇರಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಅಗತ್ಯ ವೈದ್ಯಕೀಯ ಉಪಕರಣ ಖರೀದಿಗಾಗಿ 2025-26ನೇ ಸಾಲಿನಲ್ಲಿ 150 ಕೋಟಿ ಹಣ ಕೊಡುವುದಾಗಿ ಸಿಎಂ ಹೇಳಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಅಧ್ಯಯನದಲ್ಲಿ ತೊಡಗಲು, ಆಸಕ್ತಿ ಬೆಳೆಸಿಕೊಳ್ಳಲು ಚಾಮರಾಜನಗರದಲ್ಲಿ ವಿಜ್ಞಾನ ಕೇಂದ್ರ ಇಲ್ಲವೇ ಅಥವಾ ತಾರಾಲಯ ಕಾರ್ಯಾರಂಭ ಮಾಡುವುದಾಗಿ ಘೋಷಿಸಿದ್ದಾರೆ.
ಬಂಡೀಪುರದಲ್ಲಿ ಕಾರ್ಯಪಡೆ ರಚನೆ: ಚಾಮರಾಜನಗರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಬಂಪರ್ ಅನುದಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಅಲ್ಪ ಅನುದಾನ ಘೋಷಣೆಯಾಗಿದೆ. ಬಂಡೀಪುರದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್ ತೆರೆಯಲಾಗುವುದು. ಪ್ರಾಣಿ-ಮಾನವ ಸಂಘರ್ಷ ತಡೆಗೆ ಬಂಡೀಪುರದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಸಿಎಂ ಪ್ರಕಟಿಸಿದ್ದಾರೆ.
ಮೇಕೆದಾಟು ಯೋಜನೆ ಘೋಷಿಸಬೇಕಿತ್ತು: ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, "ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಪ್ರತ್ಯೇಕ ವಿಭಾಗ ಸ್ಥಾಪನೆ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಯೋಜನೆ ಅನುಷ್ಠಾನಕ್ಕೆ ಮುಂದಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು. ಉಳಿದಂತೆ, ಚಾಮರಾಜನಗರ ಎರಡನೇ ಹಂತದ ಕುಡಿಯುವ ನೀರು, ಚಾಮರಾಜನಗರ ವಿವಿಗೆ ಹೆಚ್ಚಿನ ಅನುದಾನದ ಬಗ್ಗೆ ಮಾತನಾಡಿಲ್ಲ. ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿದ್ದರೂ ಯಾವುದೇ ಯೋಜನೆ ರೂಪಿಸಿಲ್ಲ. ಜಿಲ್ಲೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಟ್ಟಿಲ್ಲ" ಎಂದು ಅಸಮಾಧಾನ ಹೊರ ಹಾಕಿದರು.
ಗ್ಯಾರಂಟಿ ನಡುವೆ ಉತ್ತಮ ಬಜೆಟ್: ಉಪ್ಪಾರ ಸಮುದಾಯದ ಮುಖಂಡ ಜಯಕುಮಾರ್ ಮಾತನಾಡಿ, "ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಜೊತೆಗೆ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದಾರೆ. ಮೂಲಸೌಕರ್ಯ, ಶಿಕ್ಷಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ" ಎಂದರು.
ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್: ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪ್ರತಿಕ್ರಿಯಿಸಿ, "ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಮಂಡಿಸಿದ್ದಾರೆ. ಪಿಎಸಿಸಿ ಬ್ಯಾಂಕ್ಗಳಲ್ಲಿ ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದೆವು. ಕೃಷಿ ಪಂಪ್ಸೆಟ್ಗಳಿಗೆ ಹೊಸ ಸಂಪರ್ಕ ನೀಡಲು ಅಕ್ರಮ-ಸಕ್ರಮ ಯೋಜನೆ ಮುಂದುವರೆಸಬೇಕು ಎಂಬ ಒತ್ತಾಯ ಮಾಡಿದ್ದೆವು. ಬರಗಾಲದ ನಡುವೆ ಕುಡಿಯುವ ನೀರು, ಮೇವು ಪೂರೈಕೆಗೆ ಪೂರಕವಾದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದುಕೊಂಡಿದ್ದೆವು. ಆದರೆ ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಮಂಡಿಸಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ